

ಬೆಂಗಳೂರು: ಅಲ್ಲಾರಿ... ಇಂಟರ್ಕೋರ್ಸ್ ಆಗೇ ಇಲ್ಲ ಅಂತ ಯಾವ ಬಾಯಲ್ಲಿ ಹೇಳ್ತಾನ್ರಿ... ವೈದ್ಯಕೀಯ ಪರೀಕ್ಷೆ ಮಾಡಿದ್ರೆ ಎಲ್ಲಾ ಹೊರಕ್ಕೆ ಬರುತ್ತೆ. ಸಚಿವನೇ ಆಗಿರಲಿ... ಎಂಥ ಪ್ರಭಾವಿಯೇ ಆಗಿರಲಿ... ಮೆಡಿಕಲ್ ಎಕ್ಸಾಮ್ನಿಂದ ತಪ್ಪಿಸಿಕೊಳ್ಳಲು ಸಾಧ್ಯನೇ ಇಲ್ಲ...
ಹೀಗೆಂದು ಹೇಳಿದವರು ಸಿಡಿಕೇಸ್ನಲ್ಲಿ ಸಿಲುಕಿರುವ ಯುವತಿಯ ಪರ ವಕೀಲ ಮಂಜುನಾಥ್ ಅವರು. ಸೋಮವಾರ (ಮಾರ್ಚ್ 29) ನ್ಯಾಯಾಧೀಶರ ಮುಂದೆ ಯುವತಿಯನ್ನು ಹಾಜರು ಪಡಿಸಲು ಸಿದ್ಧತೆ ನಡೆಸಿರುವ ವಕೀಲರಾದ ಮಂಜುನಾಥ್ ಹಾಗೂ ಜಗದೀಶ್ ಅವರು, ಫೇಸ್ಬುಕ್ ಲೈವ್ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಸದ್ಯ ಸಿಡಿ ಪ್ರಕರಣದಲ್ಲಿ ಅತ್ಯಾಚಾರ ಹಾಗೂ ಎಕ್ಸ್ಟಾರ್ಷನ್ ಎರಡು ಕೇಸು ದಾಖಲಾಗಿದ್ದು, ಇವೆರಡನ್ನೂ ಒಂದೇ ತನಿಖಾಧಿಕಾರಿಗಳು ನಡೆಸಲು ಸಾಧ್ಯವೇ ಇಲ್ಲ. ಈ ಪ್ರಕರಣದಲ್ಲಿ ಸತ್ಯ ಮುಚ್ಚಿಹೋಗಲು ಪ್ರಯತ್ನ ನಡೆಯುತ್ತಿದೆ. ನಿಜಾಂಶ ಹೊರಕ್ಕೆ ಬರುತ್ತಿಲ್ಲ. ಯುವತಿಯ ಮೇಲೆ ಅತ್ಯಾಚಾರ ನಡೆದಿರುವ ಸತ್ಯವನ್ನು ಮುಚ್ಚಿಹಾಕಲಾಗುತ್ತದೆ ಎಂದು ವಕೀಲರು ಆರೋಪ ಮಾಡಿದ್ದಾರೆ.
ಐಪಿಸಿಯ 164ನೇ ಕಲಮಿನ ಅನ್ವಯ ಯುವತಿ ಕೋರ್ಟ್ಗೆ ಬಂದು ಕಟಕಟೆಯಲ್ಲಿ ನಿಂತು ಸತ್ಯ ಹೇಳಲು ಒಪ್ಪಿಕೊಂಡಿದ್ದಾಳೆ. ಹೀಗೆ ಮಾಡಲು ನ್ಯಾಯಾಧೀಶರು ಅನುಮತಿ ನೀಡಿದರೆ, ಸಂಪೂರ್ಣ ಸತ್ಯ ಬಯಲಾಗುತ್ತದೆ. ಇದು ಅತ್ಯಾಚಾರದ ಕೇಸ್ ಆಗಿರುವ ಹಿನ್ನೆಲೆಯಲ್ಲಿ ಇನ್ಕ್ಯಾಮೆರಾ ಪ್ರೊಸೀಡಿಂಗ್ಸ್ (ನ್ಯಾಯಾಧೀಶರ ಕೊಠಡಿಯ ಒಳಗೆ- ಸಾರ್ವಜನಿಕವಾಗಿ ಅಲ್ಲದ ವಿಚಾರಣೆ) ನಡೆಯುತ್ತದೆ ಎಂದಿದ್ದಾರೆ.
ಇಂಥ ಸಂದರ್ಭದಲ್ಲಿ ಆರೋಪಿ ಎಷ್ಟೇ ಬಲಿಷ್ಠನಾಗಿದ್ದರೂ ವೈದ್ಯಕೀಯ ಪರೀಕ್ಷೆಗೆ ಒಳಪಡಲೇಬೇಕು, ಅದೇ ರೀತಿ ಯುವತಿಯನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆಗ ಅತ್ಯಾಚಾರ ಮಾಡಿದವರು, ಅತ್ಯಾಚಾರಕ್ಕೆ ಒಳಗಾದವರ ಸತ್ಯ ಗೊತ್ತಾಗುತ್ತದೆ ಎಂದು ವಕೀಲ ಮಂಜುನಾಥ್ ಹೇಳಿದರು.
ತನ್ನ ಮೇಲೆ ಅತ್ಯಾಚಾರ ಆಗಿರುವುದಾಗಿ ಯುವತಿ ಕೊಟ್ಟಿರುವ ದೂರು ಗಂಭೀರ ಸ್ವರೂಪದ್ದು ಆಗಿರುವ ಹಿನ್ನೆಲೆಯಲ್ಲಿ ಆರೋಪಿ ಯಾವುದೇ ರೀತಿಯಲ್ಲಿ ಪ್ರಭಾವ ಬೀರಿದರೂ ನ್ಯಾಯಾಲಯಕ್ಕೆ ಕೇಸ್ ದಾಖಲು ಮಾಡಿದಾಗ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವೈದ್ಯಕೀಯ ವರದಿ ಎಲ್ಲವನ್ನೂ ಬಿಚ್ಚಿಡಲಿದೆ ಎಂದಿದ್ದಾರೆ.
ಇಬ್ಬರು ವಕೀಲರು ಮಾತನಾಡಿರುವ ವಿಡಿಯೋ ಲಿಂಕ್ ಇಲ್ಲಿದೆ ಕೇಳಿ...