

ನವದೆಹಲಿ: 2019ರಲ್ಲಿ ಹೈದರಾಬಾದ್ ಪಶುವೈದ್ಯೆಯ ಮೇಲೆ ನಡೆದಿದ್ದ ಗ್ಯಾಂಗ್ರೇಪ್ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. 'ದಿಶಾ ಗ್ಯಾಂಗ್ರೇಪ್ ಕೇಸ್' ಎಂದೇ ಕರೆಸಿಕೊಳ್ಳುತ್ತಿರುವ ಈ ಪ್ರಕರಣದಲ್ಲಿ ಯುವತಿ ಅನುಭವಿಸಿದ್ದ ಯಾತನೆ ಕೇಳಿದರೆ ಎಂಥ ಕಲ್ಲೆದೆಯವರ ಮೈ ಕೂಡ ಒಮ್ಮೆಗೆ ನಡುಗುತ್ತದೆ. ಗ್ಯಾಂಗ್ರೇಪ್ ಮಾಡಿದ್ದ ಕಾಮುಕರು ಆಕೆಯನ್ನು ಸುಟ್ಟುಹಾಕಿದ್ದರು. ಮೈಯಲ್ಲಿ ಬೆಂಕಿ ಉರಿಯುತ್ತಿದ್ದರೂ ಅರ್ಧಜೀವ ಹಿಡಿದುಕೊಂಡೇ ಯುವತಿ ಪ್ರಾಣ ರಕ್ಷಣೆಗಾಗಿ ಓಡಿ ಬಂದರೂ ಆಕೆಯನ್ನು ಅಲ್ಲಿಯೇ ಉಸಿರುಗಟ್ಟಿ ಸಾಯಿಸಿದ್ದರು ಪಾಪಿಗಳು.
ಮೊಹಮ್ಮದ್ ಆರಿಫ್, ಜೊಲ್ಲು ಶಿವ, ಜೊಲ್ಲು ನವೀನ್ ಮತ್ತು ಚೆನ್ನಕೇಶವುಲು ಎಂಬ ನಾಲ್ವರು ಪಾಪಿಗಳನ್ನು ಪೊಲೀಸರು ಸಾಯಿಸಿದ್ದರು. ಇದು ಎನ್ಕೌಂಟರ್ ಎಂದು ಹೇಳಲಾಗಿತ್ತು. ದಿಶಾಳನ್ನು ಈ ಪಾಪಿಗಳು ಅತ್ಯಾಚಾರ ಮಾಡಿದ್ದ ಜಾಗದಲ್ಲಿಯೇ ಅವರನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದಾಗ ತಾವು ಎನ್ಕೌಂಟರ್ ಮಾಡಿರುವುದಾಗಿ ಪೊಲೀಸರು ಹೇಳಿದ್ದರು.
ಅವರು ಎನ್ಕೌಂಟರ್ನಲ್ಲಿಯೇ ಸತ್ತಿರಲಿ, ಅಥವಾ ಪೊಲೀಸರೇ ಅವರನ್ನು ಉದ್ದೇಶಪೂರ್ವಕವಾಗಿ ಸಾಯಿಸಿರಲಿ, ಇಂಥ ಪಾತಕಿಗಳು ಭೂಮಿಯ ಮೇಲೆ ಇರಬಾರದು ಎಂದವರೇ ಹೆಚ್ಚು. ಇದೇ ಕಾರಣಕ್ಕೆ ಪೊಲೀಸರನ್ನು ಬಹಳ ಮಂದಿ ಅಭಿನಂದಿಸಿದ್ದರು. ದೆಹಲಿಯಲ್ಲಿ ನಡೆದ ನಿರ್ಭಯಾ ಕೇಸ್ನಲ್ಲಿ ಆರೋಪಿಗಳಿಗೆ ಶಿಕ್ಷೆ ನೀಡಲು ಆಗಿರುವ ವಿಳಂಬ, ಈ ಸಂದರ್ಭದಲ್ಲಿ ಆಕೆಯ ತಾಯಿ ಅನುಭವಿಸಿದ ಯಾತನೆ ಎಲ್ಲವುಗಳ ಬಗ್ಗೆ ಬಹಳ ಚರ್ಚೆಯಾಗಿತ್ತು. ಆದ್ದರಿಂದ ಈ ಪ್ರಕರಣದಲ್ಲಿ ಪೊಲೀಸರು ಮಾಡಿದ್ದು ಸರಿ ಎಂದೇ ಬಣ್ಣಿಸಲಾಗಿತ್ತು.
ಆದರೆ ಕೆಲವರು ಮಾತ್ರ ಈ ಆರೋಪಿಗಳನ್ನು ಸಾಯಿಸಿದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಕಾನೂನು ಇರುವಾಗ, ಕೋರ್ಟ್ಗಳು ಇರುವಾಗ ಈ ರೀತಿ ಪೊಲೀಸರು ಸಾಯಿಸಿದ್ದು ಸರಿಯಲ್ಲ, ಇದು ಎನ್ಕೌಂಟರ್ ಅಲ್ಲ, ಬದಲಿಗೆ ಪೊಲೀಸರು ಉದ್ದೇಶಪೂರ್ವಕವಾಗಿ ಸಾಯಿಸಿದ್ದು ಎಂದು ವಾದ ಶುರು ಮಾಡಿದ್ದರು. ಕೊನೆಗೆ ಈ ಎನ್ಕೌಂಟರ್ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಇದು ಅಸಲಿ ಎನ್ಕೌಂಟರೋ ಅಥವಾ ನಕಲಿಯೋ ಎಂಬ ಬಗ್ಗೆ ತನಿಖೆ ಮಾಡಲು ಸುಪ್ರೀಂಕೋರ್ಟ್ ಸಮಿತಿಯೊಂದನ್ನು ರಚಿಸಿತ್ತು. ಸಿರ್ಪುರ್ಕರ್ ಆಯೋಗದಿಂದ ತನಿಖೆ ನಡೆಯುತ್ತಿತ್ತು. ಇದೀಗ ಅದು ವರದಿಯನ್ನು ನೀಡಿದೆ, ಈ ವರದಿಯಲ್ಲಿ ಪೊಲೀಸರು ಮಾಡಿದ್ದು ನಕಲಿ ಎನ್ಕೌಂಟರ್ ಅಂದರೆ ಆರೋಪಿಗಳನ್ನು ಕೊಲ್ಲುವ ಉದ್ದೇಶದಿಂದೇ ಉದ್ದೇಶಪೂರ್ವಕವಾಗಿ ಗುಂಡಿಟ್ಟಿದ್ದಾರೆ. ಆರೋಪಿಗಳು ತಪ್ಪಿಸಿಕೊಂಡು ಹೋಗುವಾಗ ತಾವು ಗುಂಡು ಹಾರಿಸಿದ್ದು, ಇದು ಎನ್ಕೌಂಟರ್ ಎಂದಿರುವುದು ಸುಳ್ಳು ಎಂದು ವರದಿ ಹೇಳಿದೆ. ನಾಲ್ವರು ಆರೋಪಿಗಳು ಪಿಸ್ತೂಲ್ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದರು ಎಂದು ಪೊಲೀಸರು ಹೇಳಿರುವುದನ್ನು ನಂಬಲು ಸಾಧ್ಯವಿಲ್ಲ ಮತ್ತು ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ವರದಿ ತಿಳಿಸಿದೆ.
ಆಯೋಗದ ವರದಿ ಕುರಿತು ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ತೆಲಂಗಾಣ ಹೈಕೋರ್ಟ್‌ಗೆ ಸೂಚಿಸಿದೆ. ಆದ್ದರಿಂದ ಎನ್ಕೌಂಟರ್ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.