

ಹೈದರಾಬಾದ್: ಬೈಕ್‌ನಲ್ಲಿ ಹೋಗುವಾಗ ದುಪ್ಪಟ್ಟಾ, ಸೀರೆಯ ಸೆರಗು ಚಕ್ರಕ್ಕೆ ಸಿಲುಕಿ ಅಪಘಾತ ಸಂಭವಿಸುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ಭಯಾನಕ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಯುವತಿಯೊಬ್ಬರ ಜೀವಕ್ಕೆ ಅವರು ಧರಿಸಿರುವ ಬುರ್ಖಾ ಕುತ್ತಾಗಿ ಪರಿಣಮಿಸಿದ್ದು, ಅವರು ಮೃತಪಟ್ಟಿದ್ದಾರೆ.
ಬೈಕ್ ಚಕ್ರಕ್ಕೆ ಬುರ್ಖಾ ಸಿಕ್ಕಿಹಾಕಿಕೊಂಡು ಬೈಕ್‌ನಿಂದ ಬಿದ್ದ ಯುವತಿ ಪ್ರಾಣ ಕಳೆದುಕೊಂಡಿರುವ ಘಟನೆ ಇದಾಗಿದೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಬೆಚ್ಚಿಬೀಳಿಸುವಂತಿದೆ. ಹೈದರಾಬಾದ್‌ನ ಯಾಚರಂನಲ್ಲಿ 18 ವರ್ಷದ ಯುವತಿ ಮತ್ತು ಆಕೆಯ ಸಹೋದರ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಬುರ್ಖಾ ಧರಿಸಿಕೊಂಡಿದ್ದ ಯುವತಿ, ಬೈಕ್ ಹಿಂದುಗಡೆ ಕುಳಿತು ಸಹೋದರನ ಜತೆ ಪ್ರಾಯಾಣಿಸುತ್ತಿದ್ದರು. ಜೋರಾಗಿ ಗಾಳಿ ಬೀಸುತ್ತಿದ್ದುದರಿಂದ ಅವರ ಬುರ್ಖಾ ಚಕ್ರದಲ್ಲಿ ಸಿಲುಕಿಕೊಂಡಿದೆ. ಅವರು ಆಯ ತಪ್ಪಿ ಬಿದ್ದಿದ್ದಾರೆ. ಅವರ ಸಹೋದರ ಕೂಡ ಆಯತಪ್ಪಿದ್ದರಿಂದ ಬೈಕ್ ಕೆಳಕ್ಕೆ ಬಿದ್ದಿದೆ. ಯುವತಿಗೆ ಗಂಭೀರವಾದ ಗಾಯಗಳಾಗಿದ್ದವು. ಆಸ್ಪತ್ರೆಗೆ ಸೇರಿಸಿದರೂ ಮರುದಿನ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇಂತಹ ದುರಂತದ ಬಗ್ಗೆ ಎಚ್ಚರಿಕೆ ನೀಡಿರುವ ಟಿಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿಸಿ ಸಜ್ಜನರ್, 'ಮಹಿಳೆಯರೇ ಮತ್ತು ಯುವತಿಯರೇ ನೀವು ಬೈಕ್‌ನಲ್ಲಿ ಕುಳಿತುಕೊಳ್ಳುವಾಗ ಜಾಗರೂಕರಾಗಿರಿ” ಎಂದು ಟ್ವೀಟ್ ಮಾಡಿದ್ದಾರೆ.