

ಪುಣೆ: ನವರಾತ್ರಿ ಹಬ್ಬ ಹೊಸ್ತಿನಲ್ಲಿ ನಿಂತಿದೆ. ಇದಕ್ಕಾಗಿ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಹಲವೆಡೆ ಭರ್ಜರಿಯ ಸಿದ್ಧತೆ ನಡೆದಿದೆ. ಮಹಾರಾಷ್ಟ್ರದಲ್ಲಿ ದಸರಾ ಹಬ್ಬ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಆದರೆ ವಿಚಿತ್ರ ಎಂಬಂತೆ ದಸರಾ ಹಬ್ಬದ ಸಂದರ್ಭದಲ್ಲಿಯೇ ಸೆಕ್ಸ್ತಂತ್ರ ಶಿಬಿರವನ್ನು ಪುಣೆಯಲ್ಲಿ ಆಯೋಜಿಸಲಾಗಿದೆ.
ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಎಂದೇ ಖ್ಯಾತಿಯಾದ ಪುಣೆಯಲ್ಲಿ ಇಂಥದ್ದೊಂದು ಶಿಬಿರ ಆಯೋಜನೆ ಮಾಡಿರುವುದು ಸತ್ಯಂ ಶಿವಂ ಸುಂದರಂ ಪ್ರತಿಷ್ಠಾನ! ಅಕ್ಟೋಬರ್ 1ರಿಂದ 3ರವರೆಗೆ ಈ ಶಿಬಿರ ನಡೆಯಲಿದ್ದು, ಇದೀಗ ಭಾರಿ ವಿವಾದಕ್ಕೆ ಸಿಲುಕಿದೆ. ಮಹಿಳಾ ಸಂಘಟನೆಗಳು ಹಾಗೂ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಕಾಮಸೂತ್ರದಲ್ಲಿನ ಧ್ಯಾನ ಮತ್ತು ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದಂತೆ ತರಬೇತಿ ಇಲ್ಲಿ ನೀಡಲಾಗುತ್ತಿದೆ. ಮೂರು ದಿನ ಹಾಗೂ ಎರಡು ರಾತ್ರಿ ತರಬೇತಿಗೆ ಪ್ರತಿಯೊಬ್ಬರಿಗೂ ವಸತಿ ಮತ್ತು ಊಟದ ಸೌಕರ್ಯ ಕಲ್ಪಿಸಲಾಗಿದೆ. ಇದಕ್ಕೆ 15 ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿದೆ. ಇದಕ್ಕೆ ಈಗಾಗಲೇ ಆನ್ಲೈನ್ ಬುಕ್ಕಿಂಗ್ ಆರಂಭವಾಗಿದೆ. ಈ ಕುರಿತ ಕುರಿತ ಜಾಹೀರಾತು ಪೋಸ್ಟರ್ ವೈರಲ್ ಆಗಿದೆ.
ಈ ಬಗ್ಗೆ ಪುಣೆ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದ್ದು, ನವರಾತ್ರಿ ಹಬ್ಬದ ಸಂದರ್ಭದಲ್ಲಿ ಈ ಶಿಬಿರವನ್ನು ಆಯೋಜಿಸಿರುವ ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಂಎನ್ಎಸ್ ಮಹಿಳಾ ಮೋರ್ಚಾ ಆಗ್ರಹಿಸಿದೆ. ಒಂದು ವೇಳೆ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ, ತಮ್ಮದೇ ಆದ ರೀತಿಯಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮಹಿಳೆಯರು ಎಚ್ಚರಿಸಿದ್ದಾರೆ. ಹಿಂದೂ ಮಹಾಸಭಾ ಹಾಗೂ ಇತರ ಹಿಂದೂ ಸಂಘಟನೆಗಳು ಈ ಶಿಬಿರದ ಜಾಹೀರಾತು ಪ್ರತಿಯನ್ನು ಹರಿದು ಆಕ್ರೋಶ ವ್ಯಕ್ತಪಡಿಸುತ್ತಿವೆ (ಏಜೆನ್ಸೀಸ್)