

ಡೆಹ್ರಾಡೂನ್: ಭ್ರಷ್ಟಾಚಾರ ಆರೋಪ ಹೊತ್ತ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧ ಸಿಬಿಐ ನಡೆಸುತ್ತಿರುವ ತನಿಖೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಇವರ ವಿರುದ್ಧ ತನಿಖೆಗೆ ಹೈಕೋರ್ಟ್ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ತನಿಖೆಗೆ ತಡೆ ನೀಡಿದೆ.
ಗೋ ಸೇವಾ ಸೇವಾ ಅಯೋಗದ ಮುಖ್ಯಸ್ಥರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ರಾವತ್ ಅವರ ಮೇಲಿದೆ. ಈ ಸ್ಥಾನಕ್ಕೆ ತಮ್ಮ ಸಂಬಂಧಿಯೊಬ್ಬರನ್ನು ನೇಮಕ ಮಾಡುವ ಸಲುವಾಗಿ 2016ರಲ್ಲಿ ಬಿಜೆಪಿಯ ಉಸ್ತುವಾರಿಯಾಗಿದ್ದ ತ್ರಿವೇಂದ್ರ ಸಿಂಗ್ ಅವರು, ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪವಿದೆ.
ಇವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಪತ್ರಕರ್ತರೊಬ್ಬರು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ರಾವತ್ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಡೆಹ್ರಾಡೂನ್ ಸಿಬಿಐ ಪೊಲೀಸ್ ಅಧೀಕ್ಷಕರಿಗೆ ನಿರ್ದೇಶಿಸಿದ್ದರು.
ಇದನ್ನೂ ಓದಿ: ಕೆ.ಕಲ್ಯಾಣ್ ಕುಟುಂಬದಲ್ಲಿ ಹುಳಿ ಹಿಂಡಿದ್ದ ಗಂಗಾ ಕುಲಕರ್ಣಿ ಡೆತ್ನೋಟ್ ಪತ್ತೆ
ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧದ ಆರೋಪಗಳ ಸ್ವರೂಪವನ್ನು ಪರಿಗಣಿಸಿ, ಸತ್ಯವನ್ನು ಬಿಚ್ಚಿಡುವುದು ಸೂಕ್ತವೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಇದು ರಾಜ್ಯದ ಹಿತದೃಷ್ಟಿಯಿಂದ ಮತ್ತು ಅನುಮಾನಗಳನ್ನು ನಿವಾರಿಸಲು ತನಿಖೆ ಅಗತ್ಯ ಇದೆ. ಹೀಗಾಗಿ ನ್ಯಾಯಾಲಯ ಸಿಬಿಐ ತನಿಖೆ ನಡೆಸಬೇಕು ಎಂದು ನ್ಯಾಯಮೂರ್ತಿಗಳು ಹೇಳಿದ್ದರು.
ಆದರೆ ಇದನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ರಾವತ್ ಪರವಾಗಿ ವಾದ ಮಂಡಿಸಿದ್ದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರು, ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರ ವಿರುದ್ಧ ಎಫ್‌ಐಆರ್ ದಾಖಲು ಮಾಡುವ ಸಂದರ್ಭದಲ್ಲಿ ಅವರನ್ನು ವಿಚಾರಿಸಬೇಕು. ಆದರೆ ಯಾವುದೇ ರೀತಿಯ ವಿಚಾರಣೆ ನಡೆಸದೇ ಏಕಾಏಕಿ ಹೀಗೆ ಎಫ್‌ಐಆರ್ ದಾಖಲಿಸಿರುವುದು ನಿಯಮಬಾಹಿರ ಎಂದು ವಾದಿಸಿದ್ದರು. ಇದನ್ನು ಕೋರ್ಟ್ ಮಾನ್ಯ ಮಾಡಿದೆ.