

ಮುಂಬೈ: ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಆಸೆಯಿಂದ ಮುಂಬೈಗೆ ಬಂದಿದ್ದ ಯುವತಿಯರು ನಂತರ ತಮ್ಮ ಮಾನವನ್ನು ಕಳೆದುಕೊಂಡು ಇದೀಗ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ.
ಯುವತಿಯೊಬ್ಬಳು ನೀಡಿರುವ ದೂರಿನ ಮೇಲೆ ತನಿಖೆ ಕೈಗೊಂಡಾಗ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಇದಕ್ಕೆ ಕಾರಣ ಈ ಸಿನಿತಂಡ ಇದಾಗಲೇ ಹಲವಾರು ಯುವತಿಯರಿಗೆ ಇದೇ ರೀತಿಯ ಆಮಿಷ ಒಡ್ಡಿ ಬೆತ್ತಲು ಮಾಡಿ ಚಿತ್ರೀಕರಣ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಯುವತಿಯರು ಮುಂದೆ ಬಂದು ಪೊಲೀಸರಲ್ಲಿ ದೂರು ಕೊಡುವ ಧೈರ್ಯ ಮಾಡಿದ್ದಾರೆ.
ಈ ಯುವತಿಯರಿಗೆ ಎನರ್ಜಿ ಡ್ರಿಂಕ್ಸ್ ಕುಡಿ ಎಂದು ಹೇಳಿ ಪಾನೀಯ ನೀಡಿ ನಂತರ ಅವರನ್ನು ನಗ್ನಗೊಳಿಸಿ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗುತ್ತಿತ್ತು. ನಂತರ ಅದನ್ನು ಪೋರ್ನ್ ವೆಬ್ಸೈಟ್ಗಳಿಗೆ ಅಪ್ಲೋಡ್ ಮಾಡಿ ಹಣ ಗಳಿಸಲು ಈ ಸಿನಿತಂಡ ಮುಂದಾಗಿರುವುದು ತಿಳಿದುಬಂದಿದೆ.
ರೋಯಾ ಖಾನ್ ಅಲಿಯಾಸ್ ಯಾಸ್ಮೀನ್ ಗ್ಯಾಂಗ್ ಈ ಕೃತ್ಯ ಎಸಗಿದೆ. ದೂರುಗಳ ಆಧಾರದ ಮೇಲೆ, ಅಪರಾಧ ವಿಭಾಗದ ತಂಡವು ಮಲಾಡ್‌ನ ಮಾಧ್ ದ್ವೀಪದಲ್ಲಿರುವ ಗ್ರೀನ್ ಪಾರ್ಕ್ ಬಂಗಲೆಯ ಮೇಲೆ ದಾಳಿ ನಡೆಸಿ, ಯಾಸ್ಮಿನ್ ಬೇಗ್ ಖಾನ್ ಅಲಿಯಾಸ್ ರೋವಾ (ನಿರ್ಮಾಪಕ ಮತ್ತು ನಿರ್ದೇಶಕ), ಪ್ರತಿಭಾ ನಲಾವಾಡೆ (ಗ್ರಾಫಿಕ್ ಡಿಸೈನರ್), ಮೋನು ಗೋಪಾಲ್ದಾಸ್ ಜೋಶಿ (ನಟ), ಭಾನುಸೂರ್ಯಂ ಠಾಕೂರ್ (ಸಹಾಯಕ) ಮತ್ತು ಮೊಹಮ್ಮದ್ ಆಸಿಫ್ ಅಲಿಯಾಸ್ ಸೈಫೈ (ಕ್ಯಾಮೆರಾಮನ್) ವಶಕ್ಕೆ ಪಡೆದಿದೆ.
ಸಿನಿಮಾದಲ್ಲಿ ಛಾನ್ಸ್ ಕೋರಿ ಬರುವ ಯುವತಿಯರನ್ನು ಇವರು ಟಾರ್ಗೆಟ್ ಮಾಡಿಕೊಂಡು ಆಮಿಷ ತೋರಿ ಈ ಕೃತ್ಯ ಮಾಡುತ್ತಿದ್ದಾರೆ. ಇನ್ನೂ ಅನೇಕ ಮಂದಿ ಇದಕ್ಕೆ ಬಲಿಪಶುವಾಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಮೊದಲು ಬಾಂಡ್ ಒಂದರ ಮೇಲೆ ಸಹಿ ಹಾಕಿಸಿಕೊಳ್ಳುತ್ತಾರೆ. ಅದರಲ್ಲಿ ಏನು ಬರೆದಿದೆ ಎನ್ನುವುದನ್ನು ನೋಡದೇ ಯುವತಿಯರು ಸಹಿ ಹಾಕುತ್ತಾರೆ. ನಂತರ ಅವರಿಗೆ ತಿಳಿಯದೇ ಲೈಂಗಿಕವಾಗಿ ಬಳಸಿಕೊಂಡು ವಿಡಿಯೋ ಮಾಡಲಾಗುತ್ತದೆ. ಸಹಿ ಹಾಕಿರುವುದರಿಂದ ಯುವತಿಯರು ದೂರು ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.