

ಚಾಮರಾಜನಗರ: ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅಪರಾಧ ವಿಭಾಗದಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದರಾಜನಾಯಕ್ ಇಂದು ಮೃತಪಟ್ಟಿದ್ದಾರೆ.
ಕಾಡುಗಳ್ಳ ವೀರಪ್ಪನ ಜತೆ ಮೀಣ್ಯಂನಲ್ಲಿ ನಡೆದಿದ್ದ ಗುಂಡಿನ ಕಾಳಗದಲ್ಲಿ ಸಿದ್ದರಾಜ ನಾಯಕ್ ಅವರು ಬದುಕುಳಿದಿದ್ದರು. 1992ರಲ್ಲಿ ಎಸ್ಪಿ ಹರಿಕೃಷ್ಣ ಹಾಗೂ ಎಸ್ಐ ಶಕೀಲ್ ಅಹಮದ್ ಜೊತೆ ಕಾರ್ಯಾಚರಣೆಯಲ್ಲಿ ಇವರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ನಡೆದ ಚಕಮಕಿಯಲ್ಲಿ ಏಳು ಗುಂಡುಗಳು ದೇಹ ಹೊಕ್ಕಿದ್ದವು. ಇದರ ಹೊರತಾಗಿಯೂ ಸಿದ್ದರಾಜನಾಯಕ್ ಬದುಕುಳಿದಿದ್ದರು. ನಂತರ ನಾಲ್ಕು ಗುಂಡುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಾಗಿತ್ತು. ಇನ್ನೂ ಮೂರು ಗುಂಡುಗಳು ತಲೆಯಲ್ಲಿಯೂ ಉಳಿದುಕೊಂಡಿದ್ದವರು.
ಕಳೆದ ವರ್ಷ ಕರೊನಾ ಸಮಯದಲ್ಲಿ 75 ದಿನಗಳ ಕಾಲ ರಜಾ ತೆಗೆದುಕೊಳ್ಳದೆ ಕರೊನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಹೆಮ್ಮೆ ಇವರದ್ದು. ಕೇವಲ 5 ದಿನದಲ್ಲಿ ಕರ್ತವ್ಯದಿಂದ ನಿವೃತ್ತಿ ಹೊಂದಬೇಕಿದ್ದ ಇವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸಿದ್ದರಾಜನಾಯಕ್ ಸಾವಿಗೆ ಚಾಮರಾಜನಗರ ಪೊಲೀಸರಿಂದ ಸಂತಾಪ ಸೂಚಿಸಿದ್ದಾರೆ.