

ಮೆಕ್ಸಿಕೊ: ‘ನಮ್ಮನ್ನೆನಾದರೂ ಕಳ್ಳ ದೋಚಲು ಬಂದರೆ, ಅವನೇ ಎಲ್ಲಿಯೋ ಕದ್ದಿದ್ದನ್ನು ಕೊಟ್ಟು ಹೋಗುತ್ತಾನಷ್ಟೇ’ ಎಂಬ ಮಾತು ಸಾಮಾನ್ಯವಾಗಿ ಕೇಳುವುದುಂಟು. ಆದರೆ ಇಲ್ಲೊಬ್ಬ ಕಳ್ಳ ನಿಜವಾಗಿಯೂ ತಾನು ಕದ್ದ ದುಡ್ಡನ್ನು ಮನೆಯೊಳಕ್ಕೆ ಇಟ್ಟು ಹೋಗಿದ್ದಾನೆ! ಮನೆಗೆ ಕನ್ನ ಹಾಕಿದ್ದ ಕಳ್ಳ ಕೊನೆಗೆ ದುಡ್ಡು ಇಟ್ಟು ಹೋಗಿದ್ದಾನೆ.
ಇಂಥದ್ದೊಂದು ಘಟನೆ ಮೆಕ್ಸಿಕೋದಲ್ಲಿ ನಡೆದಿದ್ದು, ಇದೀಗ ವಿಶ್ವಾದ್ಯಂತ ಭಾರಿ ವೈರಲ್ ಆಗಿದೆ. ಆಗಿದ್ದೇನೆಂದರೆ, ಶಸ್ತ್ರಸಜ್ಜಿತ ಕಳ್ಳನೊಬ್ಬನು ಯಾರೂ ಇಲ್ಲದ ಮನೆಯ ಕಿಟಕಿಯನ್ನು ಮುರಿದು ಒಳಗೆ ನುಗ್ಗಿದ್ದಾನೆ. ನಂತರ ಆ ಮನೆಯಲ್ಲಿಯೇ ಸ್ನಾನ ಮಾಡಿದ್ದಾನೆ, ತಿಂಡಿ-ತಿನಿಸು ಮುಗಿಸಿದ್ದಾನೆ, ಮನೆಯಲ್ಲಿದ್ದ ಬಿಯರ್ ಕುಡಿದು ಮಲಗಿದ್ದಾನೆ, ಬೆಳಗ್ಗೆ ಎದ್ದು ಹೋಗಿದ್ದಾನೆ.
ಮನೆಯವರು ವಾಪಸಾದಾಗ ಶಾಕ್ ಆಗಿದ್ದಾರೆ. ಮನೆಯಲ್ಲಿ ಕಳ್ಳತನ ಆಗಿರುವುದು ತಿಳಿದಿದೆ. ಲಗುಬಗೆಯಿಂದ ಮನೆಯಲ್ಲಿ ಇಟ್ಟಿದ್ದ ನಗದು, ಆಭರಣಗಳನ್ನು ಪರೀಕ್ಷಿಸಿದ್ದಾರೆ. ಆದರೆ ಅವರಿಗೆ ಶಾಕ್ ಆಗಿದೆ. ಅದೇನೆಂದರೆ, ಮನೆಯಲ್ಲಿದ್ದ ತಿನಿಸು ಎಲ್ಲಾ ಖಾಲಿಯಾಗಿದ್ದರೂ, ಹಣ- ಒಡವೆ ಮಾತ್ರ ಸರಿಯಾಗಿಯೇ ಇತ್ತು. ಸಾಲದು ಎಂಬುದಕ್ಕೆ ಅಲ್ಲಿ ಟೇಬಲ್ ಮೇಲೆ 200 ಡಾಲರ್ (ಸುಮಾರು 15 ಸಾವಿರ ರೂಪಾಯಿ) ಇತ್ತು!
ಕೂಡಲೇ ಅವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ವಿಚಿತ್ರ ನೋಡಿ ಪೊಲೀಸರಿಗೂ ಅಚ್ಚರಿಯಾಗಿದೆ. ನಂತರ ಸಿಸಿಟಿವಿ ಫುಟೇಜ್ ಸೇರಿದಂತೆ ಕೆಲವೊಂದು ಸಾಕ್ಷ್ಯಗಳ ಆಧಾರದ ಮೇಲೆ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಆತನಿಗೆ ಕೇಳಿದಾಗ, ನಾನು ಕಳ್ಳತನ ಮಾಡುವ ಉದ್ದೇಶದಿಂದ ಬರಲಿಲ್ಲ, ಬದಲಿಗೆ ಮಲಗಿಕೊಳ್ಳಲು ಬೆಚ್ಚಗಿನ ಸ್ಥಳದ ಅವಶ್ಯಕತೆ ಇತ್ತು. ಅದಕ್ಕೇ ಬಂದೆ. ಮನೆಯ ಕಿಟಕಿ ಮುರಿದು ಹಾಳು ಮಾಡಿದ್ದೆ, ಜತೆಗೆ ತಿಂಡಿ-ತಿನಿಸು, ಬಿಯರ್ ಎಲ್ಲಾ ಮುಗಿಸಿದ್ದೆ. ಅದಕ್ಕಾಗಿ ಹಣ ಇಟ್ಟು ಹೋದೆ ಎಂದು ಹೇಳಿದ್ದಾನೆ.
ಕೊನೆಗೆ ತನಿಖೆಯಿಂದ ತಿಳಿದುಬಂದದ್ದು ಏನೆಂದರೆ, ಈತ ಹೋಟೆಲ್ ಒಂದರಲ್ಲಿ ನಿಂತಿದ್ದ ಕಾರನ್ನು ಕದಿಯಲು ಬಯಸಿದ್ದ. ಆ ಕಾರಿನಲ್ಲಿದ್ದ ಮಹಿಳೆಗೆ ಬೆದರಿಕೆ ಹಾಕಿದ್ದ. ಆದರೆ ಆಕೆ ಜೋರಾಗಿ ಹಾರ್ನ್ ಬಾರಿಸಲು ಶುರು ಮಾಡಿದಾಗ ಅಲ್ಲಿದ್ದವರು ಸ್ಥಳಕ್ಕೆ ಧಾವಿಸಿದರು. ಅಷ್ಟೊತ್ತಿಗಾಗಲೇ ಪೊಲೀಸರು ಸ್ಥಳಕ್ಕೆ ಬಂದರು. ಈ ಕಳ್ಳ ತಪ್ಪಿಸಿಕೊಳ್ಳಲು ಓಡೋಡಿ ಹೋಗಿದ್ದಾನೆ. ನಂತರ ಯಾರೂ ಇಲ್ಲದ ಮನೆಯೊಂದು ಕಂಡಿದೆ. ಇದೇ ತಪ್ಪಿಸಿಕೊಳ್ಳಲು ಒಳ್ಳೆಯ ಜಾಗ ಎನಿಸಿದೆ.
ಕೊನೆಗೆ ಪೊಲೀಸರು ಅತ್ತ ಹೋದಾಗ ಮನೆಯೊಳಕ್ಕೆ ನುಗ್ಗಿದ್ದಾನೆ. ಓಡೋಡಿ ಹಸಿವು ಆದ್ದರಿಂದ ತಿಂಡಿ ಎಲ್ಲಾ ಮುಗಿಸಿ, ಸ್ನಾನವನ್ನೂ ಮಾಡಿ ಮಲಗಿ ಹೋಗಿದ್ದಾನೆ. ಅವನ ಕಣ್ಣು ಇದ್ದುದು ಆ ಕಾರಿನ ಮೇಲೆ. ಅದನ್ನು ಬಿಟ್ಟು ಬೇರೆ ಯಾವ ಯೋಚನೆಯೂ ಅವನಲ್ಲಿ ಇರಲಿಲ್ಲ. ಆದ್ದರಿಂದ ಅವನಿಗೆ ಹಣವನ್ನು ದೋಚಬೇಕು ಎಂದೂ ಅನ್ನಿಸಲಿಲ್ಲ.
ಸದ್ಯ ಈತನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ ಪೊಲೀಸರು.