ಅಪ್ರಾಪ್ತ ಗಂಡನಿಂದ ಆಂಟಿಗೆ ಮಗು! ಬಾಲಕ ಪತಿಯ ಜೀವನ ನಿಮ್‌ ಕೈಗೆ ಕೊಡಲಾಗದು ಎಂದ ಹೈಕೋರ್ಟ್‌

marriage
Published on

ಅಲಹಾಬಾದ್‌: ಇದು ಬಾಲಕ ಮತ್ತು ಅವನಿಗಿಂತ ವಯಸ್ಸಿನಲ್ಲಿ ಬಹುದೊಡ್ಡ ಮಹಿಳೆಯ ನಡುವಿನ ಪ್ರೇಮ ಕಥೆ. ಇಬ್ಬರೂ ಪ್ರೀತಿಸಿ ಪಾಲಕರ ವಿರೋಧದ ನಡುವೆ ಮದುವೆಯಾಗಿದ್ದಾರೆ. ಈ ಮದುವೆಯಿಂದ ಒಂದು ಮಗುವೂ ಹುಟ್ಟಿದೆ. ಆದರೀಗ ವಿವಾಹ ಹೈಕೋರ್ಟ್‌ ಮೆಟ್ಟಿಲೇರಿದ್ದು, ಅಪ್ರಾಪ್ತ ಗಂಡ ಪತ್ನಿಯ ಬಳಿ ಇರಿಸಲು ಕೋರ್ಟ್‌ ನಿರಾಕರಿಸಿದೆ.

ಇಂಥದ್ದೊಂದು ಘಟನೆ ನಡೆದಿರುವುದು ಅಲಹಾಬಾದ್‌ನಲ್ಲಿ. 16 ವರ್ಷದ ಬಾಲಕ ತನಗಿಂತ ಎರಡು ಪಟ್ಟು ಹೆಚ್ಚಿಗೆ ಮಹಿಳೆಯೊಬ್ಬಳ ಜತೆ ಮದುವೆಯಾಗಿದ್ದಾನೆ. ಈ ಮದುವೆಯನ್ನು ವಿರೋಧಿಸಿ, ಇದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಬಾಲಕನ ತಾಯಿ ಹೈಕೋರ್ಟ್‌ ಮೊರೆ ಹೋಗಿದ್ದರು. ತಮ್ಮ ಮಗ ಇನ್ನೂ ಅಪ್ರಾಪ್ತನಾಗಿರುವ ಕಾರಣ ಮದುವೆಯನ್ನು ಅನೂರ್ಜಿತಗೊಳಿಸಿ, ಆತನನ್ನು ತಮ್ಮ ಸುಪರ್ದಿಗೆ ನೀಡಬೇಕು ಎಂದು ಕೋರಿದ್ದರು.

ವಿಚಾರಣೆ ವೇಳೆ ಬಾಲಕ, ನಮ್ಮಿಬ್ಬರ ಪ್ರೇಮದ ಸಂಕೇತವಾಗಿ ಇದಾಗಲೇ ಮಗು ಹುಟ್ಟಿದೆ. ನಾನು ಪಾಲಕರ ಬಳಿ ಹೋಗಲಾರೆ. ಪತ್ನಿಯ ಬಳಿಯೇ ಇರುವೆ. ನಮ್ಮ ಈ ಮದುವೆಗೆ ಅಂಕಿತಹಾಕಿ ಎಂದು ಕೋರ್ಟ್‌ ಅನ್ನು ಕೋರಿಕೊಂಡಿದ್ದಾನೆ.

ಆದರೆ ನ್ಯಾಯಮೂರ್ತಿಗಳು ಬಾಲಕನ ವಾದವನ್ನು ಒಪ್ಪಲಿಲ್ಲ. ಪೋಕ್ಸೋ ಕಾಯ್ದೆ ಅಡಿ ಇದು ಅಪರಾಧವಾಗಿರುವ ಕಾರಣ ಮದುವೆಯನ್ನು ಮಾನ್ಯ ಮಾಡಲಾಗುವುದಿಲ್ಲ ಎಂದು ಕೋರ್ಟ್‌ ಹೇಳಿದ್ದು, ಅಪ್ರಾಪ್ತ ಪತಿಯನ್ನು ಪತ್ನಿಯ ಸುಪರ್ದಿಗೆ ನೀಡಲಾಗದು ಎಂದಿದೆ. ಹೀಗೆ ಮಾಡಿದರೆ ಪ್ರಾಯಕ್ಕೆ ಬಂದ ಮಹಿಳೆ ಹಾಗೂ ಅಪ್ರಾಪ್ತನ ಸಹಜೀವನಕ್ಕೆ ಒಪ್ಪಿಗೆ ನೀಡಿದಂತಾಗುತ್ತದೆ. ಇದು ಕಾನೂನುಬಾಹಿರ ಎಂದಿದೆ.

ಆದರೆ ಬಾಲಕ ಪಾಲಕರ ಬಳಿ ಹೋಗಲು ಇಚ್ಛಿಸದ ಕಾರಣ ಆತನನ್ನು ಬಾಲಮಂದಿರದಲ್ಲಿ ಇರಿಸುವಂತೆ ನ್ಯಾಯಮೂರ್ತಿ ಜೆ.ಜೆ.ಮುನೀರ್‌ ಹೇಳಿದ್ದು, ಆತನಿಗೆ ಕಾನೂನುರೀತ್ಯಾ ಮದುವೆಯ ವಯಸ್ಸು ಆದ ಮೇಲೆ ಬೇಕಿದ್ದರೆ ಪತ್ನಿಯ ಜತೆ ವಾಸಿಸಲು ಅವಕಾಶ ನೀಡಲಾಗುವುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net