

ಗುರುಗ್ರಾಮ: ಒಂದೇ ಲಿಂಗದ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಇರುವುದು, ಮದುವೆಯಾಗುತ್ತಿರುವ ವಿಷಯಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ವಿದೇಶಗಳಲ್ಲಿ ಈ ಸುದ್ದಿ ಹೆಚ್ಚಿಗೆ ಕೇಳಸಿಕ್ಕರೂ ಇದೀಗ ಭಾರತದಲ್ಲಿಯೂ ಇಂಥ ಘಟನೆಗಳು ನಡೆಯುತ್ತಿವೆ.
ಅಂತೆಯೇ ಇಬ್ಬರು ಹುಡುಗಿಯರು ಓಡಿಹೋಗಿ ದೇವಸ್ಥಾನದಲ್ಲಿ ‘ಸಂಪ್ರದಾಯಬದ್ಧ’ವಾಗಿ ಮದುವೆಯಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಗುರುಗ್ರಾಮ್ ಮತ್ತು ಹರಿಯಾಣದ ಝಜ್ಜರ್ ಜಿಲ್ಲೆಯ ಸ್ನೇಹಿತೆಯರು ಏಳು ವರ್ಷ ಒಟ್ಟಿಗೇ ಇದ್ದರು. ಇದೀಗ ದಾಂಪತ್ಯ ಜೀವನಕ್ಕೆ ಅಡಿ ಇಟ್ಟಿದ್ದಾರೆ! ಸೊಹ್ನಾದಲ್ಲಿರುವ ದೇವಸ್ಥಾನವೊಂದರಲ್ಲಿ ಇವರು ಮದುವೆಯಾಗಿದ್ದಾರೆ.
ಪಟೌಡಿಯ ನಿವಾಸಿ 20 ವರ್ಷದ ಯುವತಿ, ಝಜ್ಜರ್ ಶಾಲೆಯಲ್ಲಿ ಓದುತ್ತಿದ್ದಾಗ ಅಲ್ಲಿಯ 19 ವರ್ಷದ ಯುವತಿಯ ಪರಿಚಯವಾಗಿ ಸ್ನೇಹತವಾಗಿದೆ. ಅಂದಿನಿಂದ ಏಳು ವರ್ಷ ಒಟ್ಟಿಗೇ ಒಂದೇ ಮನೆಯಲ್ಲಿ ‘ಸಂಸಾರ‘ ಮಾಡಿಕೊಂಡು ಇದ್ದರು. ಇವರ ವಿಷಯ ತಿಳಿಯುತ್ತಿದ್ದಂತೆಯೇ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಇಬ್ಬರೂ ಓಡಿ ಹೋಗಿ ಮದುವೆಯಾಗಿದ್ದಾರೆ.
ಪಟೌಡಿ ಪ್ರದೇಶದ ಯುವತಿಗೆ ಝಜ್ಜರ್ ಮೂಲದ ಯುವತಿ ತಾಳಿ ಕಟ್ಟಿದ್ದು, ಗಂಡ- ಹೆಂಡತಿ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮದುವೆಯಾಗಬೇಕೆಂಬ ವಿಷಯವನ್ನು ಕುಟುಂಬದವರಿಗೆ ತಿಳಿಸಿದಾಗ ಅವರು ಒಪ್ಪಿರಲಿಲ್ಲ. ಆನಂತರ ಇಬ್ಬರೂ ನಾಪತ್ತೆಯಾಗಿದ್ದರು. 10 ದಿನಗಳ ಸತತ ಹುಡುಕಾಟದ ನಂತರ ಪತ್ತೆಯಾಗಿದ್ದು, ಮದುವೆಯಾಗಿರುವ ವಿಷಯ ಪಾಲಕರಿಗೆ ತಿಳಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಲಿಂಗಿ ವಿವಾಹಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದ್ದು, ಈ ಬಗ್ಗೆ ಕೋರ್ಟ್ ಕೇಂದ್ರ ಸರ್ಕಾರದ ನಿಲುವನ್ನು ಕೋರ್ಟ್ ಕೇಳಿದ್ದು, ಇದಿನ್ನೂ ವಿಚಾರಣಾ ಹಂತದಲ್ಲಿದೆ. ಅದೇನೇ ಇದ್ದರೂ ಇವರಿಬ್ಬರೂ ಮಾತ್ರ ಇದೀಗ ತಾವು ವಯಸ್ಕರಾಗಿದ್ದು, ಏಳು ವರ್ಷ ಸಂಸಾರ ಮಾಡಿದ್ದೇವೆ. ಮದುವೆಗೆ ಯಾರೂ ವಿರೋಧ ಮಾಡುವಂತಿಲ್ಲ ಎಂದು ಹೇಳಿದ್ದಾರೆ.