ಸುಪ್ರಸಿದ್ಧ ವಕೀಲ ಹರೀಶ್​ ಸಾಳ್ವೆ ಎರಡನೆಯ ಮದುವೆಯ ಸಂತಸದಲ್ಲಿ...

salve
Published on

ನವದೆಹಲಿ: ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪರವಾಗಿ ವಾದ ಮಂಡಿಸುತ್ತಿರುವ, ಮಾಜಿ ಸಾಲಿಸಿಟರ್‌ ಜನರಲ್‌, ಹಿರಿಯ ವಕೀಲ ಹರೀಶ್​ ಸಾಳ್ವೆ ಅವರು ಇದೀಗ ಎರಡನೆಯ ಮದುವೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.

65 ವರ್ಷದ ಹರೀಶ್​ ಅವರು ಲಂಡನ್‌ ಮೂಲದ ಕಲಾವಿದೆ ಕ್ಯಾರೊಲೀನ್‌ ಬ್ರೊಸ್ಸಾರ್ಡ್‌ ಅವರನ್ನು ಮುಂದಿನ ವಾರ ಚರ್ಚ್​ ಒಂದರಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ.

ಕಳೆದ ಜೂನ್‌ನಲ್ಲಿ ಪತ್ನಿ ಮೀನಾಕ್ಷಿ ಅವರಿಗೆ ವಿಚ್ಛೇದನ ನೀಡಿದ್ದಾರೆ. ಇವರಿಗೆ ಸಾಕ್ಷಿ (37) ಹಾಗೂ ಸಾನಿಯಾ (33) ಎಂಬ ಹೆಣ್ಣುಮಕ್ಕಳಿದ್ದಾರೆ. ಇನ್ನು ಕ್ಯಾರೊಲೀನ್​ ಅವರಿಗೂ ಇದು ಎರಡನೆಯ ಮದುವೆಯಾಗಿದ್ದು, ಅವರಿಗೆ 18 ವರ್ಷದ ಮಗಳಿದ್ದಾರೆ.

ಕರೊನಾ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ವಿವಾಹಕ್ಕೆ ಕೇವಲ 15 ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗುವುದು ಎಂದು ಆಪ್ತ ಮೂಲಗಳು ತಿಳಿಸಿವೆ.

ಲಂಡನ್​ನಲ್ಲಿ ಚಿತ್ರಕಲಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾರೆ ಕ್ಯಾರೋಲಿನ್ ಅವರನ್ನು ಭೇಟಿಯಾಗಿದ್ದರು. ಸುಮಾರು ಒಂದು ವರ್ಷಗಳಿಂದ ಇಬ್ಬರೂ ಪರಿಚಿತರಾಗಿದ್ದಾರೆ. ಬ್ರಿಟನ್​ಲ್ಲಿ ಜನಿಸಿರುವ ಕ್ಯಾರೋಲಿನ್ ಅವರಿಗೆ ತಮ್ಮಂತೆಯೇ ಕಲೆ, ರಂಗಭೂಮಿ ಹಾಗೂ ಶಾಸ್ತ್ರೀಯ ಸಂಗೀತದ ಬಗ್ಗೆ ಅಭಿರುಚಿ ಇದೆ. ಇದೇ ಕಾರಣಕ್ಕೆ ಆಕೆಯನ್ನು ವರಿಸಿರುವುದಾಗಿ ಸಾಳ್ವೆ ಹೇಳಿದ್ದಾರೆ.

ಭಾರತದ ಮಾಜಿ ಸಾಲಿಸಿಟರ್ ಜನರಲ್ ಆಗಿರುವ ಹರೀಶ್ ಸಾಳ್ವೆ, ಜನವರಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್​ಕ್ವೀನ್ಸ್ ಕೌನ್ಸೆಲ್ ಆಗಿ ನೇಮಕವಾಗಿದ್ದಾರೆ. ಕುಲಭೂಷಣ್‌ ಜಾಧವ್‌ ನೇಣುಶಿಕ್ಷೆ ತಪ್ಪಿಸಲು ಭಾರತದ ಪರ ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ ಇವರು ವಾದ ಮಂಡಿಸುತ್ತಿದ್ದಾರೆ. ಇವರಿಗೆ ಪದ್ಮಭೂಷಣ ಪ್ರಶಸ್ತಿಯೂ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net