

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ ಇದೀಗ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಇದಕ್ಕೆ ಕಾರಣ ನೀಟ್ ಪರೀಕ್ಷೆಯ ಕುರಿತು ಸೂರ್ಯ ಮಾಡಿರುವ ಟ್ವೀಟ್!
ಕರೊನಾ ವೈರಸ್ ಬಿಕ್ಕಟ್ಟಿನ ನಡುವೆ ನೀಟ್ ಪರೀಕ್ಷೆಗೆ ಹೈಕೋರ್ಟ್ ಅನುಮತಿ ನೀಡಿರುವುದು ಹಾಗೂ ಇದರ ಬೆನ್ನಲ್ಲೇ ಪರೀಕ್ಷೆಗೆ ಹೆದರಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ವಿಷಾದ ವ್ಯಕ್ತಪಡಿಸಿದ್ದ ಸೂರ್ಯ ಈ ಕುರಿತು ಟ್ವೀಟ್ನಲ್ಲಿ ನೋವನ್ನು ಹಂಚಿಕೊಂಡಿದ್ದರು.
'ಕರೊನಾ ವೈರಸ್ನಿಂದಾಗಿ ತಮ್ಮ ಜೀವಕ್ಕೆ ಹೆದರಿ, ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯವನ್ನು ನೀಡುವ ನ್ಯಾಯಾಲಯ, ವಿದ್ಯಾರ್ಥಿಗಳನ್ನು ಮಾತ್ರ ನಿರ್ಭಯವಾಗಿ ಹೋಗಿ ಪರೀಕ್ಷೆಗಳನ್ನು ಬರೆಯುವಂತೆ ಆದೇಶಿಸುತ್ತದೆ' ಎಂದು ಟ್ವೀಟ್ ಮಾಡಿದ್ದರು.
ಜತೆಗೆ, ಲಾಕ್ಡೌನ್ ಸಮಯದಲ್ಲಿ ಎಲ್ಲಾ ಅನುಕೂಲ ಇರುವ ವಿದ್ಯಾರ್ಥಿಗಳು ಇಂಟರ್ನೆಟ್, ಆನ್ಲೈನ್ ಮೂಲಕ ಉತ್ತಮ ತರಬೇತಿ ಪಡೆದು, ಯಾವುದೇ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳು ಇದರಿಂದ ವಂಚಿತರಾಗಿದ್ದಾರೆ. ಇಂಥ ಸಂದರ್ಭದಲ್ಲಿ ಇವೆರಡೂ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡರೆ ಹೇಗೆ ಎಂದು ಅವರು ಪ್ರಶ್ನಿಸಿ, ಕೋರ್ಟ್ ಇಂಥ ಬಿಕ್ಕಟ್ಟಿನ ಸಮಯದಲ್ಲಿ ಪರೀಕ್ಷೆಗೆ ಅನುಮತಿ ನೀಡಿರುವುದು ಸರಿಯಲ್ಲ ಎಂಬ ಅರ್ಥದಲ್ಲಿ ಬರೆದಿದ್ದರು.
ಇದು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎಂ. ಸುಬ್ರಮಣಿಯಂ ಅವರ ಆಕ್ರೋಶಕ್ಕೆ ಕಾರಣವಾಗಿದ್ದು, ಅವರು ಮುಖ್ಯ ನ್ಯಾಯಮೂರ್ತಿ ಅಮರೇಶ್ವರ ಪ್ರತಾಪ್ ಸಾಹಿಗೆ ಪತ್ರ ಬರೆದು, ನಟನ ವಿರುದ್ಧ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಸೂರ್ಯ ಅವರ ಹೇಳಿಕೆಯು ನ್ಯಾಯಾಲಯದ ತಿರಸ್ಕಾರಕ್ಕೆ ಸಮನಾಗಿದೆ. ಈ ದೇಶದ ನ್ಯಾಯಾಂಗ ವ್ಯವಸ್ಥೆ ಮತ್ತು ನ್ಯಾಯಾಧೀಶರ ಮೇಲೆ ನಂಬಿಕೆ, ಗೌರವ ಅವರಿಗಿಲ್ಲ ಎಂಬುದನ್ನು ತೋರಿಸುತ್ತದೆ. ಇದರಿಂದ ಸಾರ್ವಜನಿಕರಿಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ, ವಿಶ್ವಾಸ, ಗೌರವ ಹೊರಟುಹೋಗುತ್ತದೆ ಎಂದು ನ್ಯಾಯಮೂರ್ತಿ ಸುಬ್ರಹ್ಮಣ್ಯಂ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ತಿಳಿಸಿದ್ದಾರೆ.
ಆದರೆ ಇದೇ ಬೆನ್ನಲ್ಲೇ ನಟ ಸೂರ್ಯನ ಹೇಳಿಕೆಗೆ ಹಲವಾರು ಮಂದಿ ಬೆಂಬಲ ಸೂಚಿಸಿದ್ದಾರೆ. ಈ ಹಿಂದೆ ರೈತನ ಮಗನೊಬ್ಬ ವೈದ್ಯಕೀಯ ಪರೀಕ್ಷೆಯಲ್ಲಿ ಟಾಪ್ ಗಳಿಸಿದ್ದರೂ, ಕಾಲೇಜಿಗೆ 5 ಲಕ್ಷ ರೂಪಾಯಿ ಪಾವತಿ ಮಾಡಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದೂ ಸೇರಿದಂತೆ ಈ ಪರೀಕ್ಷೆಯಿಂದ ವಿದ್ಯಾರ್ಥಿಗಳ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸಿರುವ ಹಲವಾರು ನೆಟ್ಟಿಗರು #TNStandsWithSuriya ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಸೂರ್ಯ ಅವರ ಪರವಾಗಿ ತಮಿಳುನಾಡು ನಿಂತಿದೆ ಎಂದು ಅಭಿಯಾನ ಶುರು ಮಾಡಿದ್ದಾರೆ.