ಕಾಮುಕರ ಮನೆಗಳ ಮೇಲೆ ಬುಲ್ಡೋಜರ್​ ಪ್ರಹಾರ! ಗ್ಯಾಂಗ್​ ರೇಪಿಸ್ಟ್​ಗಳಿಗೆ ಹೀಗೊಂದು ಪಾಠ

demolishion
Published on

ರೇವಾ (ಮಧ್ಯಪ್ರದೇಶ): ಅಪರಾಧಿಗಳಿಗೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಇದಾಗಲೇ ಉತ್ತರ ಪ್ರದೇಶದಲ್ಲಿ ಅವರ ಮನೆಯನ್ನು ನೆಲಸಮ ಮಾಡುವ ಘಟನೆಗಳು ನಡೆದಿವೆ. ಅದರ ಬೆನ್ನಲ್ಲೇ ಇದೀಗ ಅತ್ಯಾಚಾರಿಗಳಿಗೆ ಬುದ್ಧಿ ಕಲಿಸಲು ಮಧ್ಯಪ್ರದೇಶ ಮುಂದಾಗಿದೆ. ಇಲ್ಲಿಯ ರೇವಾ ಜಿಲ್ಲಾಡಳಿತ ಮೂವರು ಕಾಮುಕರ ಮನೆಯನ್ನು ಬುಲ್ಡೋಜರ್​ ಮೂಲಕ ಕೆಡವಿದ್ದಾರೆ.

ರೇವಾ ಜಿಲ್ಲೆಯ ನೈಗರ್ಹಿಲ್ಲಿರುವ ದೇವಸ್ಥಾನವೊಂದರಲ್ಲಿ ಅಪ್ರಾಪ್ತೆ ಮೇಲೆ ಇಬ್ಬರು ಅಪ್ರಾಪ್ತರು ಸೇರಿ ಆರು ಮಂದಿ ಕಾಮುಕರು ಅತ್ಯಾಚಾರ ಎಸಗಿದ್ದರು. ದೇವಸ್ಥಾನಕ್ಕೆ ತನ್ನ ಸ್ನೇಹಿತನೊಂದಿಗೆ ಬಂದಿದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು.

ಇಷ್ಟೇ ಅಲ್ಲದೇ, ಎರಡು ದಿನಗಳವರೆಗೆ ಆಕೆ ಮತ್ತು ಸ್ನೇಹಿತನನ್ನು ಒತ್ತೆಯಾಳಾಗಿಟ್ಟುಕೊಂಡಿದ್ದರು. ಅಲ್ಲಿಂದ ಇಬ್ಬರೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಓಡಿ ಬಂದಿದ್ದ ಅವರು ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಆರು ಮಂದಿ ಭಾಗಿಯಾಗಿದ್ದು, ಸದ್ಯ ಮೂವರನ್ನು ಬಂಧಿಸಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ನಡೆದಿದೆ.

ಸದ್ಯ ಸೆರೆ ಸಿಕ್ಕ ಮೂವರು ಕಾಮುಕರ ಮನೆಗಳನ್ನು ನೆಲಸಮಗೊಳಿಸಲಾಗಿದ್ದು, ಇನ್ನುಳಿದ ಮೂವರು ಆರೋಪಿಗಳ ಮನೆಗಳ ಮೇಲೂ ಇಂದು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ರೇವಾ ಎಎಸ್​​ಎಫ್​ ಅನಿಲ್​ ಸೋಂಕಾರ್​ ತಿಳಿಸಿದ್ದಾರೆ. ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಕಾರ್ಯವೂ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net