ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ​ ಪತಿಯನ್ನು ಮುಗಿಸಿದ್ದ ಪತ್ನಿಗೆ ಗ್ರಹಚಾರ ತಂದ ಫೋನ್​ನ ಕಾಲ್​ ರಿಕಾರ್ಡಿಂಗ್!

lady
Published on

ಸೆಲ್ಖೇಡಾ(ಉತ್ತರ ಪ್ರದೇಶ): ಮೊಬೈಲ್​ ಫೋನ್​ನಲ್ಲಿ ಮಾತನಾಡುವಾಗ ಮಾತನಾಡಿದ್ದನ್ನು ರಿಕಾರ್ಡ್​ ಮಾಡಿಕೊಳ್ಳುವ ಅವಕಾಶ ಹಲವು ಸ್ಮಾರ್ಟ್​ಫೋನ್​ಗಳಲ್ಲಿವೆ. ಕೆಲವು ಫೋನ್​ಗಳಲ್ಲಿ ಎಲ್ಲಾ ಕರೆಗಳೂ ಸ್ವಯಂ ಆಗಿ ರೆಕಾರ್ಡ್​ ಆಗುತ್ತವೆ. ಅಂಥದ್ದೇ ಒಂದು ಫೋನ್​ನಿಂದ ಖತರ್ನಾಕ್​ ಪತ್ನಿಯೊಬ್ಬಳು ಪೊಲೀಸರ ಬಲೆಗೆ ಬಿದ್ದಿದ್ದಾಳೆ!

ಪತಿಯನ್ನು ಕೊಲೆ ಮಾಡಿ ಅದನ್ನು ಆಕಸ್ಮಿಕವೆಂದು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದ ಉತ್ತರ ಪ್ರದೇಶದ ಮಥರಾ ಜಿಲ್ಲೆಯ ಸೆಲ್ಖೇಡಾ ಗ್ರಾಮದ ಪತ್ನಿಯೊಬ್ಬಳ ಭಯಾನಕ ಪ್ಲ್ಯಾನ್​ ಬಯಲಾಗಿದ್ದು ಸ್ಮಾರ್ಟ್​ಫೋನ್​ನಲ್ಲಿರೋ ಆಟೊಮ್ಯಾಟಿಕ್​ ಕಾಲ್​ ರಿಕಾರ್ಡಿಂಗ್​ನಿಂದಾಗಿ.

ಮದುವೆಯಾದ 15 ದಿನಗಳಲ್ಲೇ ಪತಿಗೆ ಕರೆಂಟ್​ ಶಾಕ್​ ಕೊಟ್ಟು ಸಾಯಿಸಿದ್ದ ಪಾತಕಿಯನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಪ್ರಿಯಕರನ ಜತೆಗೂಡಿ ಈಕೆ ಇಂಥದ್ದೊಂದು ಕೃತ್ಯ ಎಸಗಿದ್ದಳು. ಮನ್ವೇಂದ್ರ ಎಂಬುವವರ ಜತೆ ಈಕೆ ಮದುವೆ ಕಳೆದ ಮಾರ್ಚ್ 26ರಂದು ನಡೆದಿತ್ತು. ಮದುವೆಯಾದ 15 ದಿನಗಳಲ್ಲೇ ಅಂದರೆ ಏಪ್ರಿಲ್ 9ರ ರಾತ್ರಿ ಪತಿ ವಿದ್ಯುತ್​ಸ್ಪರ್ಶದಿಂದ ಮೃತಪಟ್ಟಿದ್ದರು. ತನ್ನ ಪತಿಗೆ ವಿದ್ಯುತ್ ಸ್ಪರ್ಶವಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ ಎಂದು ಕುಟುಂಬಸ್ಥರಿಗೆ ಈಕೆ ಮಾಹಿತಿ ನೀಡಿದ್ದಳು. ಎಲ್ಲರೂ ಆಗಮಿಸಿ ಮನ್ವೇಂದ್ರ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಅವರು ಮೃತಪಟ್ಟಿದ್ದರು.

ಪತಿಯ ಮೃತದೇಹದ ಮುಂದೆ ಈ ಖತರ್ನಾಕ್​ ಪತ್ನಿ ಮಾಡಿದ್ದ ಗೋಳಾಟ ನೋಡಿ, ಆಕೆಯೇ ಕೊಲೆ ಮಾಡಿದ್ದು ಎಂದು ಪೊಲೀಸರಿಗೂ ಅನುಮಾನ ಬರಲೇ ಇಲ್ಲ. ಪತಿಯ ಕುಟುಂಬಸ್ಥರಿಗೂ ಈ ವಿಷಯ ತಿಳಿಯಲಿಲ್ಲ. ಪೊಲೀಸರು ಆಕಸ್ಮಿಕ ಸಾವು ಎಂದು ಪರಿಗಣಿಸಿ ಅಲ್ಲಿಗೆ ಇತ್ಯರ್ಥ ಪಡಿಸಿದ್ದರು.

ಪತಿಯನ್ನು ಕೊಂದು ಪ್ರಿಯಕರನ ಜತೆ ಖುಷಿಯಿಂದ ಇದ್ದಳು ಈ ಪತ್ನಿ. ಆದರೆ ಈಕೆಯ ಗ್ರಹಚಾರ ಕೆಟ್ಟಿದ್ದು, ಮೃತ ಮುನ್ವೇಂದ್ರ ಅವರ ತಂದೆಗೆ ಮಗನ ಫೋನ್​ ಸಿಕ್ಕಿದಾಗ. ಯಾರಿಗಾದರೂ ಫೋನ್​ ಮಾಡುವಾಗ ಈಕೆ ಪತಿಯ ಸ್ಮಾರ್ಟ್​ಫೋನ್​ ಬಳಸುತ್ತಿದ್ದಳು. ಆದರೆ ಅದರಲ್ಲಿ ಎಲ್ಲಾ ಕರೆಗಳು ರಿಕಾರ್ಡ್​ ಆಗುತ್ತವೆ ಎನ್ನುವ ಮಾಹಿತಿ ಇರಲಿಲ್ಲ.
ಮಗ ಮೃತಪಟ್ಟ ಕೆಲ ದಿನಗಳ ಬಳಿಕ ಅವರ ತಂದೆ ಫೋನ್​ ಪರಿಶೀಲಿಸಿದ್ದಾರೆ. ಅದರಲ್ಲಿ ಕಾಲ್​ ರೆಕಾರ್ಡಿಂಗ್‌ ನೋಡಿದಾಗ ಅವರಿಗೆ ಶಾಕ್​ ಆಗಿದೆ. ಅದರಲ್ಲಿನ ಒಂದು ಕರೆಯಲ್ಲಿ, 'ನಿಮ್ಮ ಸೂಚನೆಯಂತೆ 10 ನಿಮಿಷ ಕರೆಂಟ್ ಶಾಕ್​ ಕೊಟ್ಟಿದ್ದೇನೆ. ಈಗ 10 ನಿಮಿಷಗಳ ನಿಜವಾಗಿಯೂ ಸಾಯುತ್ತಾನೆ ಅಲ್ವಾ' ಎಂದೂ ಕೇಳಿದ್ದಾಳೆ. ಮತ್ತೊಂದು ಕಡೆಯಿಂದ ಬಂದ ಪುರುಷನ ಧ್ವನಿಯಲ್ಲಿ, ಖಂಡಿತ ಸಾಯುತ್ತಾನೆ ಎಂದು ಹೇಳಿರುವುದು ರೆಕಾರ್ಡ್​ ಆಗಿತ್ತು.

ಮಾತ್ರವಲ್ಲದೇ, 'ರಾತ್ರಿ 11 ಗಂಟೆಗೆ ಬಂದು ಭೇಟಿಯಾಗುತ್ತೇನೆ ಎಂದು ಮಾತು ಕೊಟ್ಟಿದ್ದೆ.. ಯಾಕೆ ಬರಲಿಲ್ಲ' ಎಂಬುವುದೂ ಅದರಲ್ಲಿ ರಿಕಾರ್ಡ್​ ಆಗಿದೆ. ನಂತರ ಮುನ್ವೇಂದ್ರ ಅವರ ತಂದೆಗೆ ಅನುಮಾನ ಬಂದು ಪೊಲೀಸರಿಗೆ ವಿಷಯ ತಿಳಿಸಿದಾಗ ನಿಜಾಂಶ ಬಯಲಿದೆ ಬಂದಿದೆ. ಸದ್ಯ ಮುನ್ವೇಂದ್ರನ ಪತ್ನಿ ಹಾಗೂ ಆತನ ಪ್ರಿಯಕರ ಅರೆಸ್ಟ್​ ಆಗಿದ್ದಾರೆ. ಪತಿಗೆ ಮತ್ತು ಬರುವ ವಸ್ತು ನೀಡಿ ಪ್ರಜ್ಞೆ ತಪ್ಪಿಸಿ ನಂತರ ಕರೆಂಟ್​ ಶಾಕ್​ ಕೊಟ್ಟು ಕೊಲೆ ಮಾಡಿರುವುದಾಗಿ ಮನ್ವೇಂದ್ರನ ಪತ್ನಿ ಬಾಯಿ ಬಿಟ್ಟಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net