ಪ್ರೀತಿಸುತ್ತಿದ್ದ ಹುಡುಗನನ್ನೇ ಮುಗಿಸಿದ ಭಾವಿ ಪತ್ನಿ! ಮದುವೆಯ ತಯಾರಿಯಲ್ಲಿರುವಾಗಲೇ ಘೋರ ಕೃತ್ಯ

death
ಕೊಲೆಯಾದ ವಿಕಾಸ್​
Published on

ಬೆಂಗಳೂರು: ಮದುವೆಯಾಗಬೇಕಿದ್ದ ಯುವತಿಯ ಅಶ್ಲೀಲ ಪೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿ ವಿಕೃತಿ ಮೆರೆದಿದ್ದ ವೈದ್ಯನನ್ನು ಅದೇ ಯುವತಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವಿಕಾಸ್ (27) ಕೊಲೆಯಾದ ವೈದ್ಯ. ಇವರ ಕೊಲೆ ಮಾಡಿರುವ ಆರೋಪ ಪ್ರತಿಭಾ ಎಂಬಾಕೆ ಮೇಲಿದೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10ನೇ ತಾರೀಖು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಪ್ರತಿಭಾ, ಗೌತಮ್ ಸುಶೀಲ್ ಹಾಗೂ ಸೂರ್ಯ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿಭಾ ಹಾಗೂ ವಿಕಾಸ್ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಈ ವೇಳೆ ವಿಕಾಸ್ ಲ್ಯಾಪ್​ಟಾಪ್​ನಲ್ಲಿ ಪ್ರತಿಭಾರ ಅಶ್ಲೀಲ‌ ಫೋಟೋಗಳು ಪತ್ತೆಯಾಗಿದ್ದವು. ಅದನ್ನು ವಿಕಾಸ್​ ಇನ್​ಸ್ಟಾಗ್ರಾಮ್​ನಲ್ಲಿ ಅಪ್​ಲೋಡ್​ ಮಾಡಿದ್ದರು! ಇದನ್ನು ನೋಡಿ ದಿಗಿಲುಗೊಂಡ ಪ್ರತಿಭಾ ಇದನ್ನು ಪ್ರಶ್ನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಭಾರಿ ಗಲಾಟೆ ನಡೆದಿದೆ.

ಗಲಾಟೆ ವಿಕೋಪಕ್ಕೆ ಹೋಗಿದೆ. ನಂತರ ವಿಕಾಸ್​ ಜತೆ ಮಾತನಾಡಬೇಕು ಎಂದುಕೊಂಡು ಅವರನ್ನು ಒಂದು ಕಡೆ ಕರೆಸಿಕೊಂಡಿದ್ದರು ಪ್ರತಿಭಾ. ಈ ವೇಳೆ ಸ್ನೇಹಿತರಾದ ಸುಶೀಲ್​, ಸೂರ್ಯ ಹಾಗೂ ಗೌತಮ್ ಆ ಜಾಗಕ್ಕೆ ಮೊದಲೇ ಪ್ಲ್ಯಾನ್​ ಮಾಡಿದಂತೆ ಬಂದಿದ್ದರು. ಈ ವೇಳೆ ಆರೋಪಿಗಳು ವಿಕಾಸ್​ ತಲೆ ಮೇಲೆ ಬಲವಾಗಿ ಹೊಡೆದಿದ್ದಾರೆ.

ನಂತರ ಆಸ್ಪತ್ರೆಗೆ ಸೇರಿಸಿ ವಿಕಾಸನ ಪಾಲಕರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರು ಬಂದು ಚಿಕಿತ್ಸೆ ಕೊಡಿಸಿದರೂ ಅದು ಫಲಕಾರಿಯಾಗದೇ ವಿಕಾಸ್​ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ಎಫ್ಐಆರ್​ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net