

ಕನೌಜ್ (ಉತ್ತರ ಪ್ರದೇಶ): ಅನೇಕ ಕಾರಣಗಳಿಂದಾಗಿ ದಿನೇ ದಿನೇ ಬೆಲೆ ಏರಿಕೆಯಾಗುತ್ತಲೇ ಇದೆ. ದಿನ ಬಳಕೆಗೆ ಸಾಮಗ್ರಿಗಳ ಬಿಸಿ ಜನಸಾಮಾನರಿಗೆ ತಟ್ಟುತ್ತಿದೆ. ಇದರ ನಡುವೆಯೇ ಆರು ವರ್ಷದ ಬಾಲೆಯೊಬ್ಬಳು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದು ತನ್ನ ಮುನಿಸನ್ನು ತೋರಿಸಿದ್ದಾಳೆ.
ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ಕೃತಿ ದುಬೆ ಎಂಬ ಒಂದನೇ ಕ್ಲಾಸ್ ವಿದ್ಯಾರ್ಥಿನಿ ಪ್ರಧಾನಿಗೆ ಪತ್ರ ಬರೆದಿದ್ದಾಳೆ. ಅದರಲ್ಲಿ ಆಕೆ, 'ನಮಸ್ಕಾರ ಮೋದಿಜಿ, ಈಗೀಗ ಎಲ್ಲವುಗಳ ಬೆಲೆ ಹೆಚ್ಚಳವಾಗುತ್ತಿದೆ. ನೀವು ಏರಿಕೆಗೆ ಕಾರಣರಾಗಿದ್ದೀರಿ. ಈಗ ನನ್ನ ಅಭ್ಯಾಸಕ್ಕೆ ಅಗತ್ಯವಿರುವ ಪೆನ್ಸಿಲ್, ರಬ್ಬರ್ ಬೆಲೆ ಸಹ ತುಟ್ಟಿಯಾಗಿದೆ. ನನಗೆ ಇಷ್ಟವಾದ ಮ್ಯಾಗಿಯ ಬೆಲೆಯೂ ದುಬಾರಿಯಾಗಿದೆ. ಇವುಗಳನ್ನು ಕೊಡಿಸಿ ಎಂದರೆ ನನ್ನ ಅಮ್ಮ ರೇಗುತ್ತಾಳೆ ಎಂದು ಬಾಲಕಿ ಪತ್ರದಲ್ಲಿ ಬರೆದಿದ್ದಾಳೆ.
ಪೆನ್ಸಿಲ್, ಪೆನ್ ನನ್ನ ಕಲಿಕೆಗೆ ಅಗತ್ಯ. ನಾನೇನು ಮಾಡಲಿ ಎಂದು ಪ್ರಶ್ನಿಸಿದ್ದಾಳೆ. ಅಲ್ಲದೇ, ನನ್ನ ಶಾಲೆಯಲ್ಲಿ ಸಹಪಾಠಿಗಳು ಪೆನ್, ಪೆನ್ಸಿಲ್ ಕದಿಯುತ್ತಾರೆ, ಅದನ್ನು ಕೊಡಿಸು ಎಂದರೆ ಬೆಲೆ ಏರಿಕೆ ಹೆಚ್ಚಿರುವ ಕಾರಣ ಅಮ್ಮ ಗದರುತ್ತಾಳೆ ಎಂದೂ ಬಾಲಕಿ ಪತ್ರದಲ್ಲಿ ಹೇಳಿದ್ದಾಳೆ.
ಅಂದಹಾಗೆ ಈಕೆಯ ತಂದೆ ವಕೀಲರಾಗಿದ್ದು ಅವರ ಹೆಸರು ವಿಶಾಲ್ ದುಬೆ. ಈ ಪತ್ರವನ್ನು ತಮ್ಮ ಮಗಳೇ ಸ್ವಂತ ಬುದ್ಧಿ ಉಪಯೋಗಿಸಿ ಬರೆದಿದ್ದಾಳೆ ಎನ್ನುತ್ತಾರೆ ಅವರು. ಪತ್ರ ಬರೆದಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎನ್ನುವುದು ಅವರ ಮಾತು. ಇದು ನನ್ನ ಮಗಳ 'ಮನ್ ಕಿ ಬಾತ್' ಆಗಿದೆ. ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡಾಗ ನನ್ನ ಹೆಂಡತಿ ಅವಳನ್ನು ಗದರಿಸಿದಾಗ ಸಿಟ್ಟಾಗಿ ಈ ರೀತಿ ಪತ್ರ ಬರೆದಿದ್ದಾಳೆ ಎಂದಿದ್ದಾರೆ.
ಜತೆಗೆ, ಬೆಲೆ ಏರಿಕೆಯಿಂದ ಮಕ್ಕಳೂ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದಿರುವ ಅವರು, ಈ ಪತ್ರವನ್ನು ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಪತ್ರ ಸಂಬಂಧಪಟ್ಟವರಿಗೆ ತಲುಪುವಂತೆ ಮಾಡಲಾಗುವುದು ಎಂದು ಶಿಕ್ಷಣಾಧಿಕಾರಿ ಹೇಳಿದ್ದಾರೆ ಎಂದು ವಿಶಾಲ್ ದುಬೆ ವಿವರಿಸಿದ್ದಾರೆ. ಬಾಲಕಿಯ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ (ಏಜೆನ್ಸೀಸ್)