'ಕೊಲೆಯಾದ' ಪತ್ನಿ ಪ್ರೇಮಿಯ ತೋಳಲ್ಲಿ: ಅಮಾಯಕ ಪತಿ 10 ವರ್ಷಗಳ ಶಿಕ್ಷೆ ಅನುಭವಿಸುತ್ತಾ ಜೈಲಲ್ಲಿ!

jail
Published on

ಜಮಾಪುರ (ಉತ್ತರಪ್ರದೇಶ) : 100 ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುತ್ತದೆ ನಮ್ಮ ಕಾನೂನು. ಆದರೆ ಕೋರ್ಟ್​, ಕಾನೂನಿಗೆ ಬೇಕಿರುವುದು ಸಾಕ್ಷ್ಯಾಧಾರ. ಇದೇ ಕಾರಣದಿಂದ ಎಷ್ಟೋ ಮಂದಿ ಅಪರಾಧಿಗಳು ಸುಲಭದಲ್ಲಿ ತಪ್ಪಿಸಿಕೊಂಡರೆ, ಅಪರಾಧಿ ಇವನೇ ಎಂದು ಹೇಳಲು ಮೇಲ್ನೋಟಕ್ಕೆ ಒಂದಿಷ್ಟು ಸಾಕ್ಷ್ಯಾಧಾರ ಸಿಕ್ಕು ನಿರಪರಾಧಿಯೂ ಜೈಲು ಸೇರುವಂತಾಗುತ್ತಿರುವುದು ನಡೆಯುತ್ತಲೇ ಇದೆ.

ಈ ಎರಡನೆಯ ಸಾಲಿಗೆ ಸೇರಿದವ ಉತ್ತರ ಪ್ರದೇಶದ ಪತಿರಾಯ. ಪತ್ನಿಯ ಕೊಲೆ ಕೇಸ್​ನಲ್ಲಿ ಈತನಿಗೆ 10 ವರ್ಷ ಶಿಕ್ಷೆಯಾಗಿತ್ತು. ಪತ್ನಿಯ ಕೊಲೆ ತಾನು ಮಾಡಲಿಲ್ಲ, ಆಕೆ ಎಲ್ಲಿಗೆ ಹೋಗಿದ್ದಾಳೋ ಗೊತ್ತಿಲ್ಲ ಎಂದು ಪರಿಪರಿಯಾಗಿ ಹೇಳಿಕೊಂಡರೂ, ಈತನೇ ಕೊಲೆ ಮಾಡಿರುವುದಕ್ಕೆ ವಕೀಲರು ಒಂದಿಷ್ಟು ಸಾಕ್ಷ್ಯಾಧಾರ ನೀಡಿದ್ದರಿಂದ ಕೋರ್ಟ್​ ಅದನ್ನು ಒಪ್ಪಿ, ಈತನಿಗೆ 10 ವರ್ಷಗಳ ಶಿಕ್ಷೆ ವಿಧಿಸಿತ್ತು. ಆದರೆ ವಿಚಿತ್ರ ಎಂದರೆ, ಯಾರ ಕೊಲೆಯನ್ನು ಈತ ಮಾಡಿದ್ದಾನೆ ಎಂದು ಹೇಳಲಾಗಿತ್ತೋ, ಆಕೆ ಜೀವಂತವಾಗಿ ಕಾಣಿಸಿಕೊಂಡಿದ್ದಾಳೆ!

ಆಗಿದ್ದೇನು?

ಉತ್ತರ ಪ್ರದೇಶದ ಜಮಾಪುರ ಗ್ರಾಮದ ನಿವಾಸಿ ಕಂದಾಯ್ ಅವರ ಮದುವೆಯು 2006ರಲ್ಲಿ ರಾಮಾವತಿ ಎಂಬಾಕೆ ಜತೆ ನಡೆದಿತ್ತು. ಮದುವೆಯಾದ ಮೂರು ವರ್ಷಕ್ಕೆ ಅಂದರೆ 2009ರಲ್ಲಿ ರಾಮಾವತಿ ನಿಗೂಢವಾಗಿ ನಾಪತ್ತೆಯಾಗಿದ್ದರು.

ಎಲ್ಲಿ ಹುಡುಕಿದರೂ ಆಕೆ ಸಿಕ್ಕಿರಲಿಲ್ಲ. ಇದರಿಂದ ರಾಮಾವತಿಯ ತವರಿನವರಿಗೆ ಗಂಡ ಕಂದಾಯ್​ ಮೇಲೆ ಅನುಮಾನ ಶುರುವಾಯಿತು. ಆತನ ವಿರುದ್ಧ ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಿಸಿದ್ದರು. ಪೊಲೀಸರು ಕೂಡ ವಿಚಾರಣೆ ನಡೆಸಿದಾಗ ಅಲ್ಲಿ ಸಿಕ್ಕ ಸಾಕ್ಷ್ಯಾಧಾರಗಳು ಕಂದಾಯ್​ ವಿರುದ್ಧವೇ ಇತ್ತು.

ತಾನು ಈ ಕೊಲೆ ಮಾಡಲಿಲ್ಲ, ಪತ್ನಿ ಎಲ್ಲಿಗೆ ಹೋಗಿದ್ದಾಳೋ ಗೊತ್ತಿಲ್ಲ ಎಂದು ಕಂದಾಯ್ ಹೇಳಿದರೂ ಕೊಲೆ ಕೇಸ್​ ದಾಖಲಾಗಿಯೇ ಹೋಯ್ತು. ವಿಚಾರಣೆ ನಡೆಸಿದ ಕೋರ್ಟ್​ ಕೂಡ ಕಂದಾಯ್​ ತಪ್ಪಿತಸ್ಥ ಎಂದು ತೀರ್ಮಾನಿಸಿ 2017 ರಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಕಂದಾಯ್​ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲಿ ಅವರಿಗೆ ಜಾಮೀನು ಸಿಕ್ಕಿತ್ತಷ್ಟೇ. ಆದರೆ ಕೊಲೆ ಆರೋಪದಿಂದ ಬಿಡುಗಡೆಯಾಗಿರಲಿಲ್ಲ.

ಇವುಗಳ ನಡುವೆಯೇ ಇದೀಗ ಆತನ ಕೊಲೆಯಾಗಿದ್ದಾಳೆ ಎನ್ನಲಾದ ಪತ್ನಿ ರಾಮಾವತಿ ತನ್ನ ಪ್ರಿಯತಮನ ಮನೆಯಲ್ಲಿ ಕಾಣಿಸಿಕೊಂಡಿದ್ದಾಳೆ! ಇವಳನ್ನು ಕಂಡ ಸಂಬಂಧಿಯೊಬ್ಬರು ಪತಿ ಹಾಗೂ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಎಸ್‌ಎಚ್‌ಒ ರಾಮಗಾಂವ್ ಸಂಜಯ್ ಸಿಂಗ್ ನೇತೃತ್ವದ ಪೊಲೀಸ್ ತಂಡವು ರಾಮಾವತಿ ಇದ್ದ ಪ್ರದೇಶದ ಮಹಿಳಾ ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿ ರಮಾವತಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಈ ವಿಷಯವನ್ನು ಕೋರ್ಟ್​ ಗಮನಕ್ಕೆ ಇನ್ನೂ ತಂದಿಲ್ಲ. ಇಂದು ರಾಮಾವತಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ನಿರ್ದೇಶನ ಪಡೆಯುತ್ತೇವೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ)ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಪತಿಗೆ ಈಗ ಜೀವ ಬಂದಂತಾಗಿದೆ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net