ಛೇ! 3 ವರ್ಷ ಮೊದ್ಲೇ ಹುಟ್ಟ​ಬಾರದಿತ್ತಾ? ಕೈಗೆ ಬಂದಿದ್ದ 33 ಲಕ್ಷ ರೂ.ಸಂಬಳದ ಉದ್ಯೋಗ ಕಳಕೊಂಡ ಈತ!

boy job
Published on

ನಾಗ್ಪುರ (ಮಹಾರಾಷ್ಟ್ರ): ಹಲವರಿಗೆ ವಯಸ್ಸು ಮೀರುವ ಕಾರಣ, ಒಳ್ಳೆಯ ಉದ್ಯೋಗ ಸಿಗುವುದಿಲ್ಲ. ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ಬಾಲಕನೊಬ್ಬ ತನ್ನ ಚಿಕ್ಕ ವಯಸ್ಸಿನಿಂದಾಗಿ ಉದ್ಯೋಗ ಕಳೆದುಕೊಂಡಿರುವ ಘಟನೆ ನಡೆದಿದೆ!

ಅದೂ ಒಂದೆರಡಲ್ಲ, ವಾರ್ಷಿಕವಾಗಿ 33 ಲಕ್ಷ ರೂಪಾಯಿ ಕೈಗೆ ಸಿಗುವ ಉದ್ಯೋಗ! ಅಮೆರಿಕದ ಡಾಲರ್​ನಲ್ಲಿ ಸಂಬಳ ಎಣಿಸುವ ಒಳ್ಳೆಯ ಅವಕಾಶವನ್ನು ಬಾಲಕ ತಪ್ಪಿಸಿಕೊಂಡಿದ್ದಾನೆ. ಇದು ಆತನ ವಯಸ್ಸಿನ ಕಾರಣಕ್ಕೆ. 15 ವರ್ಷದ ಈ ಬಾಲಕ, ಮೂರು ವರ್ಷ ಮೊದಲೇ ಹುಟ್ಟಿದ್ದರೆ, ಅಂದರೆ 18 ವರ್ಷ ತುಂಬುತ್ತಿದ್ದ ಕಾರಣ, ಈ ವಯಸ್ಸಿನಲ್ಲಿಯೇ ಆತ ಈ ಪರಿಯ ಸಂಬಳವನ್ನು ಪಡೆಯಬಹುದಿತ್ತು.

ಆಗಿದ್ದೇನೆಂದರೆ, ನಾಗ್ಪುರದ 15 ವರ್ಷದ ಬಾಲಕ ವೇದಾಂತ್ ಡಿಯೋಕಾಟೆ ಆನ್‌ಲೈನ್ ಕೋಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ. ಈತ ತನ್ನ ತಾಯಿಯ ಹಳೆಯ ಲ್ಯಾಪ್‌ಟಾಪ್‌ನಲ್ಲಿ ತನ್ನ ಇನ್​ಸ್ಟಾಗ್ರಾಂ ಖಾತೆಯನ್ನು ಸ್ಕ್ರೋಲ್ ಮಾಡುವಾಗ ವೆಬ್‌ಸೈಟ್ ಅಭಿವೃದ್ಧಿ ಸ್ಪರ್ಧೆಯೊಂದು ಕಣ್ಣಿಗೆ ಬಿದ್ದಿದೆ. ಅದರ ಲಿಂಕ್ ನೋಡಿದ ವೇದಾಂತ್​ಗೆ ಅದರಲ್ಲಿ ಆಸಕ್ತಿ ಹುಟ್ಟಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಧರಿಸಿದ ಆತ 2000 ಕ್ಕೂ ಹೆಚ್ಚು ಸಾಲುಗಳ ಕೋಡ್ ಅನ್ನು ಕೇವಲ ಎರಡೇ ದಿನದಲ್ಲಿ ಮುಗಿಸಿಬಿಟ್ಟಿದ್ದಾನೆ. ಅದನ್ನು ಕಳುಹಿಸಬೇಕಿರುವ ವಿಳಾಸಕ್ಕೆ ಆನ್​ಲೈನ್​ ಮೂಲಕ ಕಳುಹಿಸಿದ್ದಾನೆ. ಆದರೆ ಬಾಲಕ ತನ್ನ ಕನಸಿನಲ್ಲಿಯೂ ಮುಂದೇನಾಗಬಹುದು ಎಂದು ಅರಿತಿರಲಿಲ್ಲ. ಅದು ನಡೆದೇ ಹೋಗಿದೆ.

ಕೇವಲ ಎರಡು ದಿನಗಳಲ್ಲಿ ಈ ಪರಿಯ ಕೋಡಿಂಗ್​ ಮುಗಿಸಿರುವುದನ್ನು ಕಂಡಿಗೆ ಅಮೆರಿಕದ ಪ್ರತಿಷ್ಠಿತ ಕಂಪೆನಿ. ಈತನ ವಯಸ್ಸನ್ನು ಅರಿಯದ ನ್ಯೂಜೆರ್ಸಿಯಲ್ಲಿನ ಜಾಹೀರಾತು ಸಂಸ್ಥೆಯು ವಾರ್ಷಿಕವಾಗಿ 33 ಲಕ್ಷ ರೂಪಾಯಿಗಳ ಉದ್ಯೋಗಕ್ಕೆ ಆಫರ್​ ನೀಡಿತು. ಈತನ ಡಿಟೇಲ್ಸ್​ ಕಳಿಸುವಂತೆ ಕೋರಿತು.

ಇದರಿಂದ ಹಿರಿಹಿರಿ ಹಿಗ್ಗಿದ ಬಾಲಕ ತನ್ನ ಡಿಟೇಲ್ಸ್​ ಕಳುಹಿಸಿದ್ದಾನೆ. ಆದರೆ ಈತನಿಗೆ ಇನ್ನೂ 15 ವರ್ಷ ವಯಸ್ಸಾಗಿದ್ದನ್ನು ಅರಿತ ಸಂಸ್ಥೆ, ಬೇಸರದಿಂದ ಆಫರ್​ ರಿಜೆಕ್ಟ್​ ಮಾಡಿದ್ದು, ಕಾನೂನಿನ ಅನ್ವಯ ಉದ್ಯೋಗ ನೀಡಲು ಆಗದು ಎಂದಿದೆ! ಇದರಿಂದ ಬಾಲಕ ನಿರಾಸೆಗೊಂಡಿದ್ದಾನೆ.

ಆದರೆ ಕಂಪೆನಿ ಮಾತ್ರ ಈ ಬಾಲಕನನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡಲು ತಯಾರು ಇಲ್ಲ. ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅಂದರೆ 18 ವರ್ಷ ತುಂಬಿದ ಬಳಿಕ ತಮ್ಮನ್ನು ಸಂಪರ್ಕಿಸುವಂತೆ ಕಂಪೆನಿ ಸದ್ಯ ಕೋರಿಕೊಂಡಿದೆ. ಸಾವಿರದಲ್ಲಿ ಒಬ್ಬರಿಗೆ ಸಿಗುವ ಅವಕಾಶ ಬಾಲಕ ತನ್ನ ಕಡಿಮೆ ವಯಸ್ಸಿನಿಂದಾಗಿ ಕಳೆದುಕೊಂಡಿದ್ದಾನೆ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net