

ಬಾರ್ಬೋಡಾಸ್: ಇಲ್ಲಿನ ಕೆನ್ಸಿಂಗ್ಟನ್ ಒವಲ್ ಬ್ರಿಡ್ಜ್ಸ್ಟೋನ್ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್ನ 17ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತನ್ನ ಸೂಪರ್-8 ಹಾದಿಯನ್ನು ಸುಗಮವಾಗಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕರಾದ ಟ್ರಾವಿಸ್ ಹೆಡ್ (34 ರನ್, 18 ಎಸೆತ, 2 ಬೌಂಡರಿ, 3 ಸಿಕ್ಸರ್), ಡೇವಿಡ್ ವಾರ್ನರ್ (39 ರನ್, 16 ಎಸೆತ, 2 ಬೌಂಡರಿ, 4 ಸಿಕ್ಸರ್) ಬಿರುಸಿನ ಆರಂಭ ಒದಗಿಸಿದರು. ಈ ಜೋಡಿ ಬೇರ್ಪಟ್ಟ ಬಳಿಕ ಬಂದ ನಾಯಕ ಮಿಚೆಲ್ ಮಾರ್ಷ್ 35 ರನ್ಗಳ ಕೊಡುಗೆ ನೀಡಿದರೆ, ಗ್ಲೆನ್ ಮ್ಯಾಕ್ಸ್ವೆಲ್ 28 ರನ್ ಬಾರಿಸಿದರು. ಇನ್ನು ಅಂತಿಮ ಹಂತದಲ್ಲಿ ಮಾರ್ಕಸ್ ಸ್ಟೋಯಿನಿಸ್ 17 ಎಸೆತಗಳಲ್ಲಿ 30 ರನ್ ಸಿಡಿಸಿ ಅಂತಿಮವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು.
ಕಠಿಣ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡಕ್ಕೆ ಆರಂಭಿಕರಾದ ಫಿಲ್ ಸಾಲ್ಟ್ (37 ರನ್, 23 ಎಸೆತ, 4 ಬೌಂಡರಿ, 2 ಸಿಕ್ಸರ್), ಜೋಸ್ ಬಟ್ಲರ್ (42 ರನ್, 28 ಎಸೆತ, 5 ಬೌಂಡರಿ, 2 ಸಿಕ್ಸರ್) ಬಿರುಸಿನ ಆರಂಭ ಒದಗಿಸಿದರಾದರೂ ಆಸ್ಟ್ರೇಲಿಯಾ ಬೌಲರ್ಗಳು ಇವರನ್ನು ಹೆಚ್ಚು ಹೊತ್ತು ನಿಲ್ಲಲು ಬಿಡಲಿಲ್ಲ. ಆರಂಭಿಕರಿಬ್ಬರ ನಿರ್ಗಮನದ ಬಳಿಕ ಇಂಗ್ಲೆಂಡ್ ತಂಡ ರನ್ ವೇಗಕ್ಕೆ ಆಸ್ಟ್ರೇಲಿಯಾ ವೇಗಿಗಳು ಬ್ರೇಕ್ ಹಾಕಿದ ಪರಿಣಾಮ ಅಂತಿಮ ಆಂಗ್ಲರು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ 35 ರನ್ಗಳ ಸೋಲಪ್ಪಿಕೊಂಡಿತ್ತು.
ಆಸ್ಟ್ರೇಲಿಯಾ ಪರ ಪ್ಯಾಟ್ ಕಮ್ಮಿನ್ಸ್ (4-0-23-2), ಆ್ಯಡಂ ಜಂಪಾ (4-0-28-2), ಜೋಶ್ ಹೇಜಲ್ವುಡ್ (4-0-28-1), ಮಾರ್ಕಸ್ ಸ್ಟೋಯಿನಿಸ್ (-3-0-24-1), ಮಿಚೆಲ್ ಸ್ಟಾರ್ಕ್ (3-0-37-0), ಗ್ಲೆನ್ ಮ್ಯಾಕ್ಸ್ವೆಲ್ (2-0-22-0) ರನ್ ನೀಡಿ ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಗ್ರೂಪ್-ಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ, ಇಂಗ್ಲೆಂಡ್ ತಂಡವು 4ನೇ ಸ್ಥಾನಕ್ಕೆ ಕುಸಿದಿದೆ. ಇದಲ್ಲದೆ ಇಂಗ್ಲೆಂಡ್ ತಂಡದ ಸೂಪರ್-8 ಹಾದಿಯು ದುರ್ಗಮಗೊಂಡಿದ್ದು, ಹಾಲಿ ಚಾಂಪಯನ್ನರಿಗೆ ತೀವ್ರ ಮುಖಭಂಗವಾಗಿದೆ.