ಫೋಟೋಗೆ ಪೋಸ್​ ನೀಡಲು ಹೋಗಿ 32 ಅಡಿ ಎತ್ತರದಿಂದ ಬಿದ್ದು ದುರಂತ ಅಂತ್ಯ ಕಂಡ ಸುಂದರಿ!

Russia
Published on

ದುಬೈ: ಹಾಲಿಡೇ ಮೂಡ್​ನಲ್ಲಿದ್ದ ರಷ್ಯಾ ಮೂಲದ ಮಹಿಳೆಯೊಬ್ಬಳು ಎತ್ತರದ ಬಂಡೆಯೊಂದರ ಮೇಲೆ ಕ್ಯಾಮೆರಾಗೆ ಪೋಸ್​​ ನೀಡಲು ಹೋಗಿ ಆಯತಪ್ಪಿ ಕೆಳಗೆ ಬಿದ್ದು ದುರಂತ ಸಾವಿಗೀಡಾಗಿರುವ ಘಟನೆ ದುಬೈನಲ್ಲಿ ನಡೆದಿದೆ.

ಜುಲಿಯಾ ಖಾಬಿಬುಲಿನಾ (34) ಮೃತ ದುರ್ದೈವಿ. ಪಶ್ಚಿಮಾ ರಷ್ಯಾದ ಉಫಾ ನಗರದ ನಿವಾಸಿಯಾಗಿದ್ದ, ಜುಲಿಯಾ ತನ್ನ ಫೋಟೋಗ್ರಫಿ ವೃತ್ತಿಯ ಅಭಿವೃದ್ಧಿಗಾಗಿ 2019ರಲ್ಲೇ ಯುನೈಟೆಡ್​ ಅರಬ್​ ಎಮಿರೇಟ್ಸ್​ಗೆ ಆಗಮಿಸಿದ್ದಳು. ಮೇ 15ರ ಶುಕ್ರವಾರದಂದು 32 ಅಡಿ ಎತ್ತರದ ಬಂಡೆಯೊಂದರ ಮೇಲೆ ಫೋಟೋಗೆ ಫೋಸ್ ನೀಡುವಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.

ತುಂಬಾ ಎತ್ತರದಿಂದ ಕಳಗಿನ ನೀರಿಗೆ ಬಿದ್ದರೂ ದುರಾದೃಷ್ಟವಶಾತ್​ ಮಾರಣಾಂತಿಕ ಗಾಯಗಳಿಂದ ಜುಲಿಯಾ ಅಸುನೀಗಿದ್ದು, ಆಕೆಯ ಮೃತದೇಹವನ್ನು ಯುಎಇ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಜುಲಿಯಾ ಆಪ್ತರ ಪ್ರಕಾರ ಆಕೆ ಅತ್ಯತ್ತಮ ಫೋಟೋಗ್ರಾಫರ್​ ಆಗಿದ್ದಳು. ಕರೊನಾ ವೈರಸ್​ ಆರಂಭಕ್ಕೂ ಮುನ್ನವೇ ಆಕೆ ರಷ್ಯಾ ತೊರೆದು ದುಬೈಗೆ ಆಗಮಿಸಿದ್ದಳು. ತುಂಬಾ ದಿನಗಳವರೆಗೆ ಉಳಿಯುವ ಆಲೋಚನೆ ಅವಳಲ್ಲಿರಲಿಲ್ಲ. ಆದರೆ, ಕರೊನಾದಿಂದ ವಿದೇಶ ಪ್ರಯಾಣದ ಗಡಿಗಳು ಮುಚ್ಚಿದ್ದರಿಂದ ಅನಿವಾರ್ಯವಾಗಿ ದುಬೈನಲ್ಲೇ ಉಳಿಬೇಕಾಯಿತು.

ಸ್ಪೋರ್ಟ್ಸ್​​ ಫೋಟೋಗ್ರಫಿಯಲ್ಲಿ ಪರಿಣಿತಳಾಗಿದ್ದ ಜುಲಿಯಾ, ಸಾವಿಗೂ ಮುನ್ನಾ ದಿನ ರಂಜಾನ್​ ಹಿನ್ನೆಲೆಯಲ್ಲಿ ದುಬೈನಲ್ಲಿ ಸಡಿಲಗೊಂಡಿರುವ ಲಾಕ್​ಡೌನ್​ ಕುರಿತು ಸಂತಸ ವ್ಯಕ್ತಪಡಿಸಿದ್ದಳು. ಇನ್ನೇನು ಕೆಲವೇ ದಿನಗಳಲ್ಲಿ ಊರಿಗೆ ಮರಳುವ ಆಸೆಯಲ್ಲಿದ್ದ ಜುಲಿಯಾ ಇದೀಗ ಶವವಾಗಿ ದುಬೈನಲ್ಲೇ ಉಳಿಯುವಂತಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net