ಮಾನವರ ಮೇಲಿನ ಪ್ರಯೋಗ ಮುಗಿಸಿದ ರಷ್ಯಾ; ಸೆಪ್ಟೆಂಬರ್​ನಿಂದ ಕೋವಿಡ್​-19 ಲಸಿಕೆ ಉತ್ಪಾದನೆ ಆರಂಭ

russia vaccine
Published on

ನವದೆಹಲಿ: ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಲಸಿಕೆ ತಯಾರಿಕೆ ವಿಶ್ವಾದ್ಯಂತ ಭಾರಿ ಪೈಪೋಟೊ ಎದ್ದಿದೆ. ಭಾರತ ಸೇರಿ ವಿವಿಧ ರಾಷ್ಟ್ರಗಳಲ್ಲಿ ಅಭಿವೃದ್ಧಿಪಡಿಸಲಾಗಿರುವ ಲಸಿಕೆಗಳು ಮಾನವರ ಮೇಲಿನ ಪರೀಕ್ಷೆಯ ವಿವಿಧ ಹಂತದಲ್ಲಿವೆ. ಹೀಗಿರುವಾಗ ರಷ್ಯಾ ತಾನು ಕೋವಿಡ್-19 ಲಸಿಕೆಯ ಮಾನವರ ಮೇಲಿನ ಪ್ರಯೋಗವನ್ನು ಮುಗಿಸಿದ್ದು, ಅದು ಯಶಸ್ವಿಯಾಗಿದೆ. ಸೆಪ್ಟೆಂಬರ್​ನಿಂದ ಅದರ ಉತ್ಪಾದನೆ ಆರಂಭಿಸುವುದಾಗಿ ಹೇಳಿಕೊಂಡಿದೆ.

ರಷ್ಯಾದಲ್ಲಿ ಕೂಡ ಕೋವಿಡ್​-19ರ ಎರಡು ಲಸಿಕೆಗಳು ಅಭಿವೃದ್ಧಿಗೊಳ್ಳುತ್ತಿವೆ. ವೆಕ್ಟರ್​ ಸ್ಟೇಟ್​ ರಿಸರ್ಚ್​ ಸೆಂಟರ್​ ಆಫ್​ ವೈರಾಲಜಿ ಆ್ಯಂಡ್​ ಬಯೋಟೆಕ್ನಾಲಜಿ ಒಂದು ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದ್ದರೆ, ಗ್ಯಾಮಲೇಯಾ ಸೈಂಟಿಫಿಕ್​ ರಿಸರ್ಚ್​ ಇನ್​ಸ್ಟಿಟ್ಯೂಟ್​ ಆಫ್​ ಎಪಿಡೆಮಿಯಾಲಜಿ ಆ್ಯಂಡ್​ ಮೆಕ್ರೋಬಯಾಲಜಿ ರಷ್ಯಾದ ರಕ್ಷಣಾ ಸಚಿವಾಲಯದ ನೆರವಿನೊಂದಿಗೆ ಇನ್ನೊಂದು ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ.

ಟಾಸ್​ ಸಂಸ್ಥೆಯ ಆ.1ರ ವರದಿಯ ಪ್ರಕಾರ ಗ್ಯಾಮ್​-ಕೋವಿಡ್​-ವ್ಯಾಕ್​ ಲೈಯೋ ಎಂಬ ಗ್ಯಾಮಲೇಯಾ ಸೈಂಟಿಫಿಕ್​ ರಿಸರ್ಚ್​ ಇನ್​ಸ್ಟಿಟ್ಯೂಟ್​ನ ಲಸಿಕೆಯ ಮಾನವರ ಮೇಲಿನ ಪ್ರಯೋಗ ಪೂರ್ಣಗೊಂಡಿದೆ. ಆ.10 ಅಥವಾ 12ರಿಂದ ಲಸಿಕೆಯ ನೋಂದಣಿ ಪ್ರಕ್ರಿಯೆ ನಡೆಯಲಿದ್ದು, ನೋಂದಣಿ ಲಭ್ಯವಾದ ಒಂದು ವಾರದಲ್ಲಿ ಉತ್ಪಾದನೆ ಆರಂಭವಾಗಲಿದೆ ಎಂದು ಹೇಳಿದೆ. ರಷ್ಯಾದ ಆರೋಗ್ಯ ಸಚಿವ ಮಿಖೈಲ್​ ಮುರ್ಷ್​ಕೋ ಸಹ ಇದನ್ನು ಖಚಿತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net