

ಕುಂದಾಪುರ: ನಗರ ಪ್ರದೇಶಗಳಲ್ಲಿ ತಂತ್ರಜ್ಞಾನವನ್ನು ಈಗಾಗಲೇ ಶಿಕ್ಷಣದಲ್ಲಿ ಯಶಸ್ವಿಯಾಗಿ ಬಳಸಲಾಗುತ್ತಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂತಹ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಶಾಲೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ತಂತ್ರಜ್ಞಾನ ಆಧಾರಿತ ಬೋಧನೆ ಆರಂಭಿಸುತಿದೆ ಎಂದು ಲೀಡ್ ಸಂಸ್ಥೆ ಶಾಲಾ ಸಲಹೆಗಾರ ಸತೀಶ್ ಹೇಳಿದರು.
ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಇತ್ತೀಚೆಗೆ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ವಿಭಾಗದ ಪಾಲಕ-ಪೋಷಕರಿಗಾಗಿ ನಡೆದ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲೀಡ್ ಸಂಸ್ಥೆ ದಕ್ಷಿಣ ವಲಯ ಸಿಇಒ ಶಶಿಕಾಂತ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂವಹನ ಕೌಶಲ ಎಷ್ಟು ಮುಖ್ಯವಾದದ್ದು, ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿವಿಧ ಪರೀಕ್ಷೆ ಬರೆಯಲು, ಸಂದರ್ಶನಗಳಲ್ಲಿ ಆತ್ಮವಿಶ್ವಾಸದಿಂದ ಉತ್ತರಿಸಲು ತಂತ್ರಜ್ಞಾನಾಧಾರಿತ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಪ್ರಾಂಶುಪಾಲ ಶರಣ ಕುಮಾರ, ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಲೀಡ್ ಸಂಸ್ಥೆ ಪ್ರಾಂತೀಯ ಮುಖ್ಯಸ್ಥ ಸಮಿವುಲ್ಲಾ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸುಜಾತಾ ಸದಾರಾಮ್ ಸ್ವಾಗತಿಸಿದರು. ಶಿಕ್ಷಕಿಯರಾದ ಶ್ರುತಿ, ಗೀತಾ, ಸ್ವಾತಿ ಕಾರ್ಯಕ್ರಮ ನಿರ್ವಹಿಸಿದರು.