

ಉಡುಪಿ: ರಾಜ್ಯ ಸರ್ಕಾರ 1 ಸಾವಿರ ಬೀಡಿಗೆ 331 ರೂ. ಇದ್ದ ಕನಿಷ್ಠ ವೇತನವನ್ನು 270 ರೂ.ಗೆ ಇಳಿಕೆ ಮಾಡಿದ್ದು, ಕೂಡಲೇ ಈ ಅದೇಶ ಹಿಂಪಡೆದು ಕನಿಷ್ಠ 395 ರೂ. ನಿಗದಿ ಮಾಡಬೇಕು ಎಂದು ಬೀಡಿ ಎಂಡ್ ಟೋಬ್ಯಾಕೋ ಲೇಬರ್ ಯೂನಿಯನ್ ಅಧ್ಯಕ್ಷೆ ನಳಿನಿ ಎಸ್. ಆಗ್ರಹಿಸಿದರು.
ಬೀಡಿ ಕಾರ್ಮಿಕ ಕನಿಷ್ಠ ವೇತನ ಹಾಗೂ ತುಟ್ಟಿಭತ್ಯೆ ಕಡಿತಗೊಳಿಸಿದ ಸರ್ಕಾರದ ಆದೇಶ ವಾಪಾಸ್ಸಾತಿಗೆ ಒತ್ತಾಯಿಸಿ ಬೀಡಿ ಎಂಡ್ ಟ್ಯೋಬ್ಯಾಕೋ ಲೇಬರ್ ಯೂನಿಯನ್ ನೇತೃತ್ವದಲ್ಲಿ ತಹಶಿಲ್ದಾರರ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಗ್ರಾ$ಜುವಿಟಿ ಹಣ ನೀಡದೆ ವಂಚಿಸುತ್ತಿರುವ ಬೀಡಿ ಕಂಪೆನಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಬೇಕು. ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಆರೋಗ್ಯ ಸಹಾಯಧನ, ವಿದ್ಯಾರ್ಥಿ ವೇತನ, ಮನೆ ನಿರ್ಮಾಣಕ್ಕೆ ಧನ ಸಹಾಯ ನಿರಂತರ ಒದಗಿಸಬೇಕು. ಕಳೆದ 7 ವರ್ಷಗಳಿಂದ ಬಾಕಿ ಇರುವ ಡಿಎ ಮತ್ತು ವೇತನಗಳನ್ನು ಮಾಲೀಕರಿಂದ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಂದರ್, ಅಖಿಲ ಭಾರತ ಬೀಡಿ ಫೆಡರೇಶನ್ ಯೂನಿಯನ್ ಕೇಂದ್ರ ಸಮಿತಿ(ದೆಹಲಿ) ಸದಸ್ಯರಾದ ಕವಿರಾಜ್ ಎಸ್.ಕಾಂಚನ್ , ಸಿಐಟಿಯು ಉಡುಪಿ ಜಿಲ್ಲಾ ಕೋಶಾಧಿಕಾರಿ ಶಶಿಧರ ಗೋಲ್ಲ, ಸಮಿತಿ ಸದಸ್ಯರಾದ ಗಿರಿಜಾ, ವಸಂತಿ, ಶಾರದಾ ಉಪಸ್ಥಿತರಿದ್ದರು.