ಮಳೆಗಾಲ ವಿಪತ್ತು ನಿರ್ವಹಣೆಗೆ ಅಗತ್ಯ ಕ್ರಮ

udp-15-cmc
Published on

ಉಡುಪಿ: ಮಳೆಗಾಲದ ತುರ್ತು ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪ ವಿಪತ್ತು ನಿರ್ವಹಣೆಗೆ ಅಧಿಕಾರಿಗಳು ಸೂಕ್ತ ಪೂರ್ವ ತಯಾರಿ ನಡೆಸಿ, ಜನರ ಸಮಸ್ಯೆಗೆ ತುರ್ತಾಗಿ ಸ್ಪಂದಿಸಬೇಕು ಎಂದು ಶಾಸಕ ಯಶ್​ ಪಾಲ್​ ಸುವರ್ಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರಸಭೆ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಮಳೆಗಾಲದ ಪೂರ್ವಸಿದ್ಧತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ವಿದ್ಯುತ್​ ಲೈನ್​ ಹತ್ತಿರವಿರುವ ಮರದ ಗೆಲ್ಲುಗಳ ತೆರವು ಮಾಡಬೇಕು. ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್​ ತಂತಿ ಹಾಗೂ ಕಂಬಗಳನ್ನು ಬದಲಾಯಿಸಬೇಕು. ಮಳೆಗಾಲದ ಸಂದರ್ಭದಲ್ಲಿ ತುರ್ತು ನಿರ್ವಹಣೆಗೆ ಗುತ್ತಿಗೆ ಆಧಾರದಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರ ತೆರವಿಗೆ ಕ್ರಮ ವಹಿಸಬೇಕು. ತುರ್ತು ಸಂದರ್ಭದಲ್ಲಿ ವಿಶೇಷ ಕಾರ್ಯಾಚರಣೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಸನ್ನದ್ಧ ರಾಗಿರಬೇಕು. ಸಣ್ಣ ನೀರಾವರಿ ಇಲಾಖೆಯ ಮೂಲಕ ಮಳೆಗಾಲದ ಆರಂಭಕ್ಕೂ ಮುನ್ನ ರಾಜ ಕಾಲುವೆ ಹಾಗೂ ತೋಡುಗಳ ಹೂಳು ತೆರವುಗೊಳಿಸಿ ನೀರು ಸರಾಗವಾಗಿ ಹರಿಯಲು ಕ್ರಮ ವಹಿಸಬೇಕು. ಕೃತಕ ನೆರೆ ಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳ ಸಮರ್ಪಕ ನಿರ್ವಹಣೆ, ರಸ್ತೆ ಬದಿಯ ಚರಂಡಿ ನೀರು ಸರಾಗವಾಗಿ ಹರಿಯಲು ಹಾಗೂ ರಸ್ತೆ ಬದಿ ಹಲ್ಲುಗಳ ತೆರವಿಗೆ ಅಧಿಕಾರಿಗಳಿಗೆ ತಿಳಿಸಿದರು. ಕಂದಾಯ ಇಲಾಖೆಯ ಅಧಿಕಾರಿಗಳು ಮಳೆಗಾಲದ ಪ್ರಾಕೃತಿಕ ವಿಕೋಪದಿಂದ ಸಾರ್ವಜನಿಕರ ಆಸ್ತಿ ಪಾಸ್ತಿಗಳು ನಷ್ಟ ಸಂಭವಿಸಿದಾಗ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಜಿಲ್ಲಾಡಳಿತಕ್ಕೆ ಹಾನಿಯ ಬಗ್ಗೆ ವರದಿ ಸಲ್ಲಿಸಿ ಗರಿಷ್ಠ ಪರಿಹಾರ ಒದಗಿಸಲು ಸಹಕರಿಸಬೇಕು ಎಂದರು. ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾ ಪ್ರಸಾದ್​, ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net