

ಮುಂಬೈ: ತೆಲುಗಿನ ಚಿಲಸೌ ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ನಟಿ ರುಹಾನಿ ಶರ್ಮಾ. ಬಳಿಕ ಕೆಲ ಸಿನಿಮಾಗಳಲ್ಲಿ ನಟಿಸಿದರಾದರು ಅಷ್ಟಾಗಿ ಸಕ್ಸಸ್ ಕಾಣಲಿಲ್ಲ. ಆಗ್ರಾ ಸಿನಿಮಾದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟರು. ಈ ಸಿನಿಮಾವನ್ನು 2023ರಲ್ಲಿ ಕಾನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದುಕೊಂಡ ಸಿನಿಮಾ ಕೆಲವು ಇಂಟಿಮೇಟ್ ದೃಶ್ಯಗಳ ಕಾರಣದಿಂದ ಭಾರತದಲ್ಲಿ ಸ್ಟ್ರೀಮ್ ಆಗಲಿಲ್ಲ.
ಆದರೆ ಸಿನಿಮಾಲ್ಲಿನ ರುಹಾನಿ ಶರ್ಮಾ ಅವರ ಬೋಲ್ಡ್ ದೃಶ್ಯಗಳ ಕೆಲವೊಂದು ಕ್ಲಿಪ್ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಸಾಂಪ್ರದಾಯಿಕ ತೆಲುಗು ಹುಡುಗಿಯಾಗಿ ನೋಡಿದ್ದವರು ಈ ಬೋಲ್ಡ್ ದೃಶ್ಯಗಳನ್ನು ನೋಡಿ ತಮ್ಮದೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತ ಟ್ರೋಲ್ ಮಾಡುತ್ತಿದ್ದಾರೆ.
ಈ ಟ್ರೋಲ್ಗಳಿಗೆ ನಟಿ ರುಹಾನಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರಿಗೂ ನಾನು ಒಂದು ವಿಷಯ ಹೇಳಲು ಬಯಸುತ್ತೇನೆ. ನನ್ನ ಆಗ್ರಾ ಚಿತ್ರದಿಂದ ಸೋರಿಕೆಯಾಗಿರುವ ಕೆಲವು ದೃಶ್ಯಗಳನ್ನು ನೋಡಿ ಸಿನಿಮಾವನ್ನು ನಿರ್ಣಯಿಸುವುದು ನಿಜವಾಗಿಯೂ ನೋವಿನ ಸಂಗತಿಯಾಗಿದೆ. ಕಲಾತ್ಮಕ ಸಿನಿಮಾ ಮಾಡುವುದು ಸುಲಭವಲ್ಲ. ತಿಂಗಳುಗಟ್ಟಲೆ ನಿದ್ರೆಯಿಲ್ಲದೆ ಶ್ರಮಪಟ್ಟಿ ಮಾಡಿರುವ ಸಿನಿಮಾ. ಆ ಶ್ರಮ ವ್ಯರ್ಥವಾಗುವುದನ್ನು ನೋಡಿದರೆ ದುಃಖವಾಗುತ್ತದೆ.
ಈ ಸಿನಿಮಾದಲ್ಲಿನ ಪಾತ್ರಕ್ಕೆ ಜೀವ ತುಂಬಲು ನಾವು ಪಟ್ಟ ಶ್ರಮವನ್ನು ಅರ್ಥಮಾಡಿಕೊಳ್ಳದೆ ಕೆಲುವು ದೃಶ್ಯಗಳಿಂದ ನಿರ್ಣಯಿಸುವುದು ಕ್ರೂರವಾಗಿದೆ. ಆಗ್ರಾ ಸಿನಿಮಾ ಇತರೆ ಚಿತ್ರಗಳಂತಲ್ಲ. 2023ರಲ್ಲಿ ಕಾನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಅನೇಕ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನನ್ನ ನಿರ್ಧಾರಕ್ಕೆ ನಾನು ಬದ್ಧಳಾಗಿದ್ದೇನೆ. ಈ ಚಿತ್ರದಲ್ಲಿ ನಟಿಸಿದ್ದಕ್ಕೆ ಹಾಗೂ ಸಿನಿಮಾದಲ್ಲಿ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ.
ಕನಸು ಕಾಣುವುದು ಅಷ್ಟು ಸುಲಭವಲ್ಲ. ಇದು ಅನೇಕ ಸವಾಲುಗಳು ಮತ್ತು ಭಾವನೆಗಳಿಂದ ತುಂಬಿದೆ. ಕಲಾವಿದರ ಶ್ರಮವನ್ನು ಟೀಕಿಸುವ ಬದಲು ಇಂತಹ ವೈವಿಧ್ಯಮಯ ಚಿತ್ರಗಳನ್ನು ಪ್ರೋತ್ಸಾಹಿಸಿ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
ನಟಿ ರುಹಾನಿ ಶರ್ಮಾ ಸೈಂಧವ್, ಆಪರೇಷನ್ ವ್ಯಾಲೆಂಟೈನ್ ಮತ್ತು ಶ್ರೀರಂಗ ನೀತುಲು ಸಿನಿಮಾಗಳಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ನಟಿ ಮುಂದೆ ತಮಿಳಿನ ಮಾಸ್ಕ್ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)