

ಹೈದರಾಬಾದ್: ಕಲ್ಕಿ 2898 ಎಡಿ ಸಿನಿಮಾದಲ್ಲಿದ ಪ್ರಭಾಸ್ ಜೋಕರ್ನಂತೆ ಕಾಣುತ್ತಾರೆ ಎಂದು ಬಾಲಿವುಡ್ ನಟ ಅರ್ಷದ್ ವಾರ್ಸಿ ನೀಡಿರುವ ಹೇಳಿಕೆಯ ವಿವಾದವು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಅರ್ಷದ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಆಕ್ರೋಶ ಹೊರಹಾಕಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ನಿರ್ಮಾಪಕರು, ನಟರು ಕೂಡ ಪ್ರಭಾಸ್ ಪರ ಬ್ಯಾಟಿಂಗ್ ಮಾಡಿ ಅರ್ಷದ್ ಕಾಮೆಂಟ್ ಅನ್ನು ಟೀಕಿಸಿದರು.
ಈ ವಿಚಾರಕ್ಕೆ ಸಂಬಂಧಿಸಿದ್ದಂತೆ ನಟ ಸುಧೀರ್ ಬಾಬು, ನ್ಯಾಚ್ಯುರಲ್ ಸ್ಟಾರ್ ನಾನಿ ಪ್ರತಿಕ್ರಿಯಿಸಿದ್ದರು. ಇದೀಗ MAA(ಚಲನಚಿತ್ರ ಕಲಾವಿದರ ಸಂಘ) ಪರವಾಗಿ ನಟ ವಿಷ್ಣು, ಕಿರುತೆರೆ ಕಲಾವಿದರ ಸಂಘದ ಅಧ್ಯಕ್ಷೆ ನಟಿ ಪೂನಂ ಧಿಲ್ಲೋನ್ ಅವರಿಗೆ ಪತ್ರ ಬರೆದಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕಿದೆ, ನಾವು ಅದನ್ನು ಗೌರವಿಸುತ್ತೇವೆ. ಆದರೆ ಪ್ರಭಾಸ್ ಬಗ್ಗೆ ಅರ್ಷದ್ ವಾರ್ಲಿ ಹಗುರವಾಗಿ ಮಾತನಾಡಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತಿಯನ್ನು ಜಾಗತಿಕಮಟ್ಟಕ್ಕೆ ಕೊಂಡೊಯ್ದ ಪ್ರಭಾಸ್ ಬಗೆಗಿನ ಈ ಕಾಮೆಂಟ್ ತೆಲುಗು ಚಿತ್ರರಂಗದ ಹಲವರಿಗೆ ಹಾಗೂ ಅಭಿಮಾನಿಗಳ ಭಾವನೆಗಳಿಗೆ ಧಕ್ಕೆ ತಂದಿದೆ. ಯಾರೊಬ್ಬರ ಬಗ್ಗೆಯೂ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇಂಡಸ್ಟ್ರಿಯಲ್ಲಿ ಪ್ರತಿಯೊಬ್ಬರ ಗೌರವವನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನಾವೆಲ್ಲರೂ ಸಿನಿಮಾ ಕುಟುಂಬಕ್ಕೆ ಸೇರಿದವರು. ಪ್ರಸ್ತುತ ಡಿಜಿಟಲ್ಯುಗದಲ್ಲಿ ಏನೇ ಹೇಳಿದರು ಕ್ಷಣಮಾತ್ರದಲ್ಲಿ ಎಲ್ಲರಿಗೂ ತಿಳಿಯುತ್ತದೆ. ಸೆಲೆಬ್ರಿಟಿಗಳಾಗಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಭವಿಷ್ಯದಲ್ಲಿ ಇಂತಹ ಪ್ರಮಾದ ನಡೆಯದಂತೆ ನೋಡಿಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಆ ಪತ್ರವನ್ನು ಮಂಚು ವಿಷ್ಣು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಅರ್ಷದ್, ನನಗೆ ಇಷ್ಟವಾಗದ ಕಲ್ಕಿ ಸಿನಿಮಾವನ್ನು ನಾನು ನೋಡಿದೆ. ಸಿನಿಮಾದಲ್ಲಿ ಅಮಿತ್ ಜೀ ಅವರ ನಟನೆ ಅದ್ಭುತವಾಗಿದೆ. ಅವರಲ್ಲಿರುವ ಶಕ್ತಿಯಲ್ಲಿ ಸ್ವಲ್ಪವಾದರೂ ನಮಗೆ ಸಿಕ್ಕಿದರೆ ಜೀವನವು ಉತ್ತಮವಾಗಿರುತ್ತದೆ. ಆದರೆ ಪ್ರಭಾಸ್ ನಟನೆಯನ್ನು ನೋಡಿ ನನಗೆ ನಿಜವಾಗಿಯೂ ಬೇಜರಾಗಿದೆ. ಪ್ರಭಾಸ್ ಜೋಕರ್ನಂತೆ ಕಾಣುತ್ತಿದ್ದಾರೆ. ನಾನು ಮ್ಯಾಡ್ಮ್ಯಾಕ್ಸ್, ಗಿಬ್ಸನ್ ಅವರಂತೆ ನೋಡಲು ಇಷ್ಟಪಡುತ್ತೇನೆ. ಅವರು ಏಕೆ ಹೀಗೆ ನಟಿಸಿದ್ದಾರೆ ಎಂದು ನನಗೆ ಅರ್ಥವಾಗುತಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್)