

ಬೆಂಗಳೂರು: ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ನೀಡುವ ಪ್ರತಿಷ್ಠಿತ ಪ್ರಶಸ್ತಿಯಾದ ಉತ್ಕೃಷ್ಟ ಪತ್ರಿಕೋದ್ಯಮದ ರಾಷ್ಟ್ರೀಯ ಪ್ರಶಸ್ತಿಯನ್ನು ವಿಜಯವಾಣಿಯ ಸಹಾಯಕ ಸಂಪಾದಕ ರುದ್ರಣ್ಣ ಹರ್ತಿಕೋಟೆ ಅವರು ಇಂದು ದೆಹಲಿಯಲ್ಲಿ ಸ್ವೀಕರಿಸಿದರು.
ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದ ಡೆಪ್ಯುಟಿ ಸ್ಪೀಕರ್ ಹಾಲ್ನಲ್ಲಿ ಇಂದು ಸಂಜೆ ನಡೆದ ಸಮಾರಂಭದಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷೆ ನ್ಯಾ. ರಂಜನಾ ಪ್ರಕಾಶ್ ದೇಸಾಯಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ವಿಜಯವಾಣಿಯಲ್ಲಿ 2019ರ ಮೇ 22ರಂದು ಪ್ರಕಟವಾದ ರುದ್ರಣ್ಣ ಹರ್ತಿಕೋಟೆ ಅವರ ವರದಿ ಹಿನ್ನೆಲೆಯಲ್ಲಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪಿಸಿಐ ತಿಳಿಸಿದೆ. ನ್ಯಾಷನಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ಜರ್ನಲಿಸಂ-2020ರ ಪ್ರಶಸ್ತಿಗೆ ರುದ್ರಣ್ಣ ಆಯ್ಕೆಯಾಗಿದ್ದನ್ನು ಪಿಸಿಐ ಫೆ. 7ರಂದು ಘೋಷಿಸಿತ್ತು.