ಮಗನ ಕಾಟ ತಾಳಲಾಗದೇ ಆತನನ್ನು ಬರ್ಬರವಾಗಿ ಕೊಲೆ ಮಾಡಿದ ತಂದೆ!

Bharathesh
Published on

ಬೆಳಗಾವಿ: ಮಗನ ಕಾಟವನ್ನು ತಾಳಲಾಗದೆ ತಂದೆಯೊಬ್ಬ ಆತನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ತಂದೆ ಮಾರಕಾಸ್ತ್ರದಿಂದ ಬೀಸಿದ ಹೊಡೆತಕ್ಕೆ ಮಗ ಸ್ಥಳದಲ್ಲೇ ಸಾವಿಗೀಡಾಗಿದ್ದು, ಶವ ರಕ್ತದ ಮಡುವಿನಲ್ಲಿ ಬಿದ್ದಿದೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ಈ ಬರ್ಬರ ಕೊಲೆ ನಡೆದಿದೆ. ಭರತೇಶ ಜಿನ್ನಪ್ಪಾ ಕಾಂಜಿ (30) ಕೊಲೆಯಾದವ. ಈತನ ತಂದೆ ಜಿನ್ನಪ್ಪಾ ಕಾಂಜಿ ಕೊಲೆ ಆರೋಪಿ. ಪ್ರಾಥಮಿಕ ಮೂಲಗಳ ಪ್ರಕಾರ ಮಗನ ಕಾಟ ತಾಳಲಾಗದೆ ತಂದೆ ಕೊಲೆ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ.

ಮದ್ಯಪಾನಕ್ಕೆ ಹಣ ಕೊಡು ಎಂದು ಪುತ್ರ ನಿತ್ಯವೂ ತಂದೆಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಈತನ ಉಪಟಳ ತಾಳಲಾರದೆ ತಂದೆ ಹರಿತವಾದ ಆಯುಧದಿಂದ ತಲೆಯ ಹಿಂಭಾಗಕ್ಕೆ ಜೋರಾಗಿ ಹೊಡೆದಿದ್ದಾನೆ. ಹೊಡೆತ ತೀವ್ರತೆಗೆ ತಲೆಯ ಹಿಂಭಾಗ ಕತ್ತರಿಸಿಹೋಗಿದ್ದು, ಪುತ್ರ ಸ್ಥಳದಲ್ಲೇ ಶವವಾಗಿ ಬಿದ್ದಿದ್ದಾನೆ. ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿದೆ. ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net