

ಹೈದರಾಬಾದ್: ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್ಆರ್ಆರ್' ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಸದ್ಯದ ಮಟ್ಟಿಗೆ ಹೇಳುವುದಾದರೆ, ಈ ಚಿತ್ರದ ಚಿತ್ರೀಕರಣ ಜನವರಿಗೆ ಮುಗಿದು, ಮುಂದಿನ ಜುಲೈ 30ಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.
ಈ ಮಧ್ಯೆ, ಚಿತ್ರದ ಕುರಿತಾಗಿ ಒಂದು ಸುದ್ದಿ ಬಂದಿದೆ. ಬಹುಶಃ ಈ ಸುದ್ದಿಯೇನಾದರೂ ನಿಜವೇ ಆದರೆ, ಆಗ ಭಾರತೀಯ ಚಿತ್ರರಂಗದಲ್ಲೇ ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಚಿತ್ರವು ಹೊಸ ದಾಖಲೆ ಬರೆಯಲಿದೆ. ಇಷ್ಟಕ್ಕೂ ಆ ಸುದ್ದಿ ಏನು ಎಂಬ ಪ್ರಶ್ನೆ ಬರುವುದು ಸಹಜ.
ಮೂಲಗಳ ಪ್ರಕಾರ, 'ಆರ್ಆರ್ಆರ್' ಚಿತ್ರದ ಸ್ಯಾಟಿಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನು ಕೊಳ್ಳುವುದಕ್ಕೆ ಸ್ಟಾರ್ ನೆಟ್ವರ್ಕ್ ಮುಂದಾಗಿದ್ದು, ಈಗಾಗಲೇ ಚಿತ್ರತಂಡದವರ ಜತೆಗೆ ಮಾತುಕತೆ ನಡೆಸಿದೆಯಂತೆ. ಅದರ ಪ್ರಕಾರ, ಸ್ಯಾಟಿಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕೆ, ಸ್ಟಾರ್ ಸಮೂಹ ಕೊಡುತ್ತಿರುವ ಮೊತ್ತವೆಷ್ಟು ಗೊತ್ತಾ? 200 ಕೋಟಿ ರೂಪಾಯಿಗಳು.
ಭಾರತದಲ್ಲಿ ಯಾವುದೇ ಚಿತ್ರದ ಸ್ಯಾಟಿಲೈಟ್ ಮತ್ತು ಡಿಜಿಟಲ್ ಹಕ್ಕುಗಳಿಗೆ ಇಷ್ಟೊಂದು ಮೊತ್ತದ ಹಣವನ್ನು ಇದುವರೆಗೂ ನೀಡಲಾಗಿಲ್ಲ ಎಂದು ಹೇಳಲಾಗುತ್ತದೆ. ಅದಕ್ಕೆ ಹೇಳಿದ್ದು, ಸುದ್ದಿ ನಿಜವೇ ಆದರೆ, 'ಆರ್ಆರ್ಆರ್' ಚಿತ್ರವು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆಯಲಿದೆಯಂತೆ.
ಇನ್ನು, ಜನವರಿಯಲ್ಲಿ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಜ್ಯೂನಿಯರ್ ಎನ್ಟಿಆರ್, ರಾಮ್ಚರಣ್ ತೇಜ, ಅಜಯ್ ದೇವಗನ್ ಸೇರಿದಂತೆ ಎಲ್ಲಾ ಪ್ರಮುಖ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತದೆ.