

ಮುಂಬೈ: 'ನಾನು ಯಾರಲ್ಲೂ ಕ್ಷಮೆ ಕೇಳಿಲ್ಲ. ಕೇಳೋದೂ ಇಲ್ಲ. ಏಕೆಂದರೆ, ನಾನು ಯಾವ ತಪ್ಪನ್ನೂ ಮಾಡಿಲ್ಲ ...' ಎಂದು ಹೇಳಿದ್ದ ನಟಿ ಪಾಯಲ್ ಘೋಶ್, ಇದೀಗ ರಿಚಾ ಅವರ ಕ್ಷಮೆ ಕೇಳುವುದಕ್ಕೆ ಸಿದ್ಧರಿದ್ದಾರಂತೆ. ಆದರೆ, ಕೆಲವು ಷರತ್ತುಗಳು ಅನ್ವಯಿಸುತ್ತವೆ. ಒಂದು ಪಕ್ಷ ಆ ಷರತ್ತುಗಳಿಗೆ ರಿಚಾ ಒಪ್ಪಿದರೆ, ಆಗ ಪಾಯಲ್ ಬಹಿರಂಗವಾಗುವುದಕ್ಕೆ ಕ್ಷಮೆ ಕೇಳುವುದಕ್ಕೆ ಸಿದ್ಧರಿದ್ದಾರಂತೆ.
ಕಳೆದ ತಿಂಗಳಷ್ಟೇ, ನಟ-ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ನಟಿ ಪಾಯಲ್ ಘೋಶ್ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ಈ ಸಂದರ್ಭದಲ್ಲಿ ಅನುರಾಗ್ ಕಶ್ಯಪ್ ಖುದ್ದು ತಮಗೆ ನಟಿಯರಾದ ರಿಚಾ ಚಡ್ಢಾ, ಮಾಹಿ ಗಿಲ್ ಮತ್ತು ಹ್ಯೂಮಾ ಖುರೇಷಿ ಮುಂತಾದವರು ಸಹಕರಿಸಿದ್ದಾಗಿ ತಮ್ಮ ಬಳಿ ಹೇಳಿಕೊಂಡಿದ್ದಾಗಿ ಹೇಳಿದ್ದರು.
ಈ ಪ್ರಕರಣದಲ್ಲಿ ತಮ್ಮ ಹೆಸರನ್ನು ಅನಾವಶ್ಯಕವಾಗಿ ತರಲಾಗುತ್ತಿದೆ ಎಂದು ರಿಚಾ ಬೇಸರ ವ್ಯಕ್ತಪಡಿಸುವುದರ ಜತೆಗೆ, ಪಾಯಲ್ ವಿರುದ್ಧ ಮುಂಬೈ ಹೈಕೋರ್ಟ್ನಲ್ಲಿ ರಿಚಾ ಮಾನನಷ್ಟ ಮೊಕ್ಕದ್ದಮೆಯನ್ನು ಹೂಡಿದ್ದಾರೆ.
ಪಾಯಲ್ ಅವರು ತಾವು ರಿಚಾ ವಿರುದ್ಧ ನೀಡಿರುವ ಹೇಳಿಕೆಯನ್ನು ಹಿಂಪಡೆಯುವುದಕ್ಕೆ ಸಿದ್ಧರಾಗಿರುವುದರ ಜತೆಗೆ, ಕ್ಷಮೆಯನ್ನೂ ಕೇಳಿದ್ದಾರೆ ಎಂದು ಪಾಯಲ್ ಪರ ವಕೀಲ ನಿತಿನ್ ಸಾತ್ಪುಟೆ ಅವರು ನ್ಯಾಯಾಲಯಕ್ಕೆ ಹೇಳಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದು ಅಪ್ಪಟ ಸುಳ್ಳು ಎಂದು ಪಾಯಲ್ ಹೇಳಿದ್ದರು. ಅಷ್ಟೇ ಅಲ್ಲ, ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದರು.
ಇದೀಗ ಪಾಯಲ್ ಅವರು ರಿಚಾ ಕ್ಷಮೆ ಕೇಳುವುದಕ್ಕೆ ತಯಾರಿದ್ದಾರೆ ಎಂದು ಸ್ವತಃ ನಿತಿನ್ ಸಾತ್ಪುಟೆ ಹೇಳಿಕೊಂಡಿದ್ದಾರೆ. ರಿಚಾ ಅವರು ಪಾಯಲ್ ಮೇಲೆ ಹೊರಿಸಿರುವ ಕ್ರಿಮಿನಲ್ ದಾವೆಯನ್ನು ಹಿಂದಕ್ಕೆ ಪಡೆಯುವುದಾದರೆ, ತಮ್ಮ ಕಕ್ಷಿದಾರರು ಕೇಸ್ನ್ನು ಹಿಂದಕ್ಕೆ ಪಡೆಯಲಿದ್ದಾರೆ ಎಂದು ಸಾತ್ಪುಟೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನ್ಯಾಯಾಲಯವು ಪಾಯಲ್ ಮತ್ತು ರಿಚಾ ಅವರಿಗೆ ಈ ಪ್ರಕರಣವನ್ನು ಪರಸ್ಪರ ಬಗೆಹರಿಸಿಕೊಳ್ಳುವುದಕ್ಕೆ ಸೂಚಿಸಿದ್ದು, ಅಕ್ಟೋಬರ್ 14ಕ್ಕೆ ಮತ್ತೆ ಈ ವಿಚಾರಣೆಯನ್ನು ಕೈಗೆತ್ತುಕೊಳ್ಳುವುದಾಗಿ ತಿಳಿಸಿದೆ.