

ಹೈದರಾಬಾದ್: ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್ಆರ್ಆರ್' ಚಿತ್ರದ ಚಿತ್ರೀಕರಣ ಇಂದಿನಿಂದ ಪುನಃ ಪ್ರಾರಂಭವಾಗಿದೆ. ಚಿತ್ರೀಕರಣ ಪ್ರಾರಂಭವಾಯ್ತು ಎಂದ ಮಾತ್ರಕ್ಕೆ ಇನ್ನು ಕೆಲವೇ ದಿನಗಳಲ್ಲಿ ಮುಗಿದು, ಆದಷ್ಟು ಬೇಗ ಪ್ರಾರಂಭವಾಗಬಹುದು ಎಂದು ಖುಷಿಪಡಬೇಡಿ.
'ಆರ್ಆರ್ಆರ್' ಚಿತ್ರೀಕರಣವೇನೋ ಪ್ರಾರಂಭವಾಗಿರಬಹುದು. ಆದರೆ, ಸದ್ಯಕ್ಕೆ ಬಿಡುಗಡೆಯಾಗುವುದಿಲ್ಲ. ಏಕೆಂದರೆ, ಇದೊಂದು ಟ್ರಯಲ್ ಶೂಟ್ ಅಷ್ಟೇ. ಹೆಚ್ಚು ಜನರನ್ನಿಟ್ಟುಕೊಂಡು ಶೂಟಿಂಗ್ ಮಾಡಬೇಕಾಗಿರುವುದರಿಂದ, ಯಾವುದೇ ಸಮಸ್ಯೆ ಇಲ್ಲದೆ ಹೇಗೆ ಮಾಡಬಹುದು ಎಂದು ಅರಿತುಕೊಳ್ಳುವುದಕ್ಕೆ 'ಆರ್ಆರ್ಆರ್' ಚಿತ್ರತಂಡ ಇಂದಿನಿಂದ ಟ್ರಯಲ್ ಶೂಟ್ ಪ್ರಾರಂಭಿಸಿದೆ.
ಈ ಟ್ರಯಲ್ ಶೂಟ್ ಇರುವುದು ಈ ವಾರ ಮಾತ್ರ. ಆ ನಂತರ ಒಂದು ದೊಡ್ಡ ಗ್ಯಾಪ್ ಕೊಡಲಾಗುತ್ತದಂತೆ. ದಸರಾ ಹಬ್ಬ ಮುಗಿದ ನಂತರ ಮತ್ತೆ ಚಿತ್ರೀಕರಣ ಪ್ರಾರಂಭವಾಗುವುದು ಎಂದು ಹೇಳಲಾಗುತ್ತಿದೆ. ಆಮೇಲೆ ಸ್ವಲ್ಪ ಸ್ವಲ್ಪ ಚಿತ್ರೀಕರಣ ಮಾಡಲು ಉದ್ದೇಶಿಸಿರುವ ಚಿತ್ರತಂಡ, ಜನವರಿಯಲ್ಲಿ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭಿಸಲಿದೆಯಂತೆ. ಕೊನೆಯ ಹಂತದ ಚಿತ್ರೀಕರಣದಲ್ಲಿ ಜ್ಯೂನಿಯರ್ ಎನ್ಟಿಆರ್, ರಾಮ್ಚರಣ್ ತೇಜ, ಅಜಯ್ ದೇವಗನ್ ಸೇರಿದಂತೆ ಎಲ್ಲಾ ಪ್ರಮುಖ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತದೆ.
ಇನ್ನು ಟ್ರಯಲ್ ಶೂಟ್ ಸಂದರ್ಭದಲ್ಲಿ ಭಾಗವಹಿಸಿರುವ ಕಲಾವಿದರು ಮತ್ತು ತಂತ್ರಜ್ಱರಿಂದ ಯಾವುದೇ ಸಮಸ್ಯೆ ಆಗಬಾರದು ಎಂಬ ನಿಟ್ಟಿನಲ್ಲಿ ಬಂಜಾರ ಹಿಲ್ಸ್ ಮತ್ತು ಮಾಧಾಪುರದ ಹೋಟೆಲ್ಗಳಲ್ಲಿ ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆಯಂತೆ. ಒಂದೊಮ್ಮೆ ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ದಿನಗಳಲ್ಲಿ ಬೇಗಬೇಗ ಚಿತ್ರೀಕರಣ ಮುಗಿಸುವ ಯೋಚನೆ ಚಿತ್ರತಂಡಕ್ಕಿದೆ.
ಈಗಾಗಲೇ ಚಿತ್ರ ಸಾಕಷ್ಟು ತಡವಾಗಿರುವುದರಿಂದ, ಆದಷ್ಟು ಬೇಗ ಚಿತ್ರದ ಕೆಲಸಗಳನ್ನೆಲ್ಲಾ ಮುಗಿಸಿ, ಮುಂದಿನ ವರ್ಷ ಜುಲೈ 30ಕ್ಕೆ ಚಿತ್ರ ಬಿಡುಗಡೆ ಮಾಡಿ ಎಂಬ ಅಭಿಯಾನವನ್ನು ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಿದ್ದಾರೆ.