ಆರ್​ಆರ್​ಆರ್ ಬಿಡುಗಡೆ ಮತ್ತೆ ಮುಂದಕ್ಕೆ; ಅವಕಾಶ ಬಳಸಿಕೊಳ್ಳುತ್ತಾನಾ ಭಿಮ್ಲಾ ನಾಯಕ್?

RRR
Published on

ಬೆಂಗಳೂರು: ಎಲ್ಲವೂ ಸಾಂಗವಾಗಿಯೇ ಹೋಗುತ್ತಿತ್ತು. ಪ್ರಚಾರದ ಅಬ್ಬರವೂ ಅಷ್ಟೇ ಜೋರಾಗಿತ್ತು. ಪ್ರೇಕ್ಷಕರೂ ಸಿನಿಮಾ ಕಣ್ತುಂಬಿಕೊಳ್ಳುವ ಕಾತರದಲ್ಲಿದ್ದರು. ಆದರೆ, ಇದೀಗ ಇದ್ದಕ್ಕಿದ್ದಂತೆ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ. ಯಾವಾಗ ಎಂಬ ಪ್ರಶ್ನೆಗೆ ಉತ್ತರವೂ ಅಸ್ಪಷ್ಟವಾಗಿದೆ!

ಭಾನುವಾರ ಸಂಜೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​ನಲ್ಲಿ ಅದ್ದೂರಿ ಬಿಡುಗಡೆ ಪೂರ್ವ ಕಾರ್ಯಕ್ರಮವನ್ನು ‘ಆರ್​ಆರ್​ಆರ್’ ತಂಡ ಆಯೋಜಿಸಿತ್ತು. ಸಿಎಂ ಬಸವರಾಜ್ ಬೊಮ್ಮಾಯಿ ಸೇರಿ ನಟರಾದ ಶಿವರಾಜಕುಮಾರ್, ಉಪೇಂದ್ರ, ಯಶ್, ಧ್ರುವ ಸರ್ಜಾ ಅತಿಥಿಗಳಾಗಿ ಭಾಗವಹಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಇವೆಂಟ್ ಮುಂದೂಡಲ್ಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇದೀಗ ಸ್ವತಃ ಚಿತ್ರತಂಡವೇ ಪ್ರತಿಕ್ರಿಯೆ ನೀಡಿದೆ.

‘ಯಾವುದೂ ನಮ್ಮ ಕೈಯಲ್ಲಿ ಇಲ್ಲ. ಕೆಲವು ರಾಜ್ಯಗಳಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಲಾಗುತ್ತಿದೆ. ಹಾಗಾಗಿ ಅನಿರ್ದಿಷ್ಟಾವಧಿಗೆ ಚಿತ್ರವನ್ನು ಮುಂದೂಡುತ್ತಿದ್ದೇವೆ. ಎಲ್ಲವೂ ಸರಿಯಾದ ಮೇಲೆ ಚಿತ್ರಮಂದಿರಕ್ಕೆ ಬರುತ್ತೇವೆ’ ಎಂದು ನಿರ್ದೇಶಕ ರಾಜಮೌಳಿ ಟ್ವಿಟ್ ಮಾಡಿದ್ದಾರೆ.

‘ಆರ್​ಆರ್​ಆರ್’ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇದೇ 7ರಂದು ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಬೇಕಿತ್ತು. ಆದರೆ, ದೇಶದ ಹಲವು ರಾಜ್ಯಗಳಲ್ಲಿ ಒಮಿಕ್ರಾನ್ ಭೀತಿಯಿಂದಾಗಿ ಚಿತ್ರಮಂದಿರಗಳಲ್ಲಿ ಮತ್ತೆ ಶೇ. 50 ಆಸನ ಭರ್ತಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ದೆಹಲಿ ಮತ್ತು ತಮಿಳುನಾಡಿನಲ್ಲಿ ಚಿತ್ರಮಂದಿರಗಳಲ್ಲಿ ಒಂದಷ್ಟು ನಿರ್ಬಂಧಗಳನ್ನು ವಿಧಿಸಲಾಗಿದೆ. ಮಹಾರಾಷ್ಟ್ರದಲ್ಲಿಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಅಲ್ಲಿನ ಸರ್ಕಾರ ಮುಂದಾಗಿದೆ. ಇದೆಲ್ಲವನ್ನು ಆಧರಿಸಿ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ.

ರಾಧೆ ಶ್ಯಾಮ್ ಆತಂಕ: ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ರಾಧೆ ಶ್ಯಾಮ್ ಜ. 14ರ ಸಂಕ್ರಾಂತಿಗೆ ಬಿಡುಗಡೆ ಆಗಬೇಕಿತ್ತು. ಬಹುಕೋಟಿ ವೆಚ್ಚದ ಈ ಚಿತ್ರವೂ ಬಿಡುಗಡೆಯನ್ನು ಮುಂದೂಡಲಿದೆ ಎಂದೇ ಹೇಳಲಾಗುತ್ತಿದೆ. ಸದ್ಯ ಚಿತ್ರತಂಡಗಳಿಂದ ಪೋಸ್ಟ್​ಪೋನ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಎರಡು ಬಿಗ್ ಸಿನಿಮಾಗಳು ರಿಲೀಸ್ ರೇಸ್​ನಿಂದ ಹಿಂದೆ ಸರಿಯುತ್ತಿದ್ದಂತೆ, ಜ.12ಕ್ಕೆ ಪವನ್ ಕಲ್ಯಾಣ್ ‘ಭಿಮ್ಲಾ ನಾಯಕ್’ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net