ಟಿ20 ವಿಶ್ವಕಪ್ 2024: ವೆಸ್ಟ್ ಇಂಡೀಸ್‌ನಿಂದ ಸ್ಟಾರ್ ಬ್ಯಾಟರ್ ಔಟ್​! ತಲೆಕೆಡಿಸಿಕೊಂಡ ಕ್ಯಾಪ್ಟನ್​ ಹೇಳಿದ್ದಿಷ್ಟು

Untitled design - 2024-06-20T152943.372
Published on

ಸೇಂಟ್ ಲೂಸಿಯಾ: ಪ್ರಸಕ್ತ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ವೆಸ್ಟ್​ ಇಂಡೀಸ್​ನಲ್ಲಿ ನಡೆಯುತ್ತಿದ್ದು, ಇಂದು (ಜೂ.20) ನಡೆದ ವೆಸ್ಟ್​ ಇಂಡೀಸ್​ ಮತ್ತು ಇಂಗ್ಲೆಂಡ್​ ವಿರುದ್ಧದ ಸೂಪರ್​ 8 ಹಂತದ ಪಂದ್ಯದಲ್ಲಿ ಆಂಗ್ಲರ ತಂಡ 8 ವಿಕೆಟ್​ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮ್ಯಾಚ್​ ಸೋತ ಬಳಿಕ ತಂಡದ ಕುರಿತು ಕೆಲವೊಂದು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡ ಕ್ಯಾಪ್ಟನ್ ರೋವ್ಮನ್ ಪೊವೆಲ್, 101 ಮೀಟರ್​ ಸಿಕ್ಸ್​ ಸಿಡಿಸಿದ ಆಟಗಾರನ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿದ್ದ ಗೊಂದಲಗಳನ್ನು ಸಹ ಬಗೆಹರಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಓಪನಿಂಗ್ ಮಾಡಿದ ಸ್ಟಾರ್​ ಆರಂಭಿಕ ಬ್ಯಾಟ್ಸ್​ಮನ್ ​ಬ್ರಾಂಡನ್ ಕಿಂಗ್, 101 ಮೀ.ನ ಬೃಹತ್ ಸಿಕ್ಸರ್ ಸಿಡಿಸಿ, ತಂಡಕ್ಕೆ ಉತ್ತಮ ಕಿಕ್‌ಸ್ಟಾರ್ಟ್ ನೀಡಿದರು. ಜೋಫ್ರಾ ಆರ್ಚರ್ ಮತ್ತು ಸ್ಯಾಮ್ ಕರನ್​ ಬೌಲಿಂಗ್ ದಾಳಿಗೆ ತತ್ತರಿಸದ ಕಿಂಗ್, ಬೌಂಡರಿಗಳಿಂದ ರನ್​ ಗಳಿಕೆಯನ್ನು ಹೆಚ್ಚಿಸಿದರು. ಇನ್ನು ಐದನೇ ಓವರ್​ನಲ್ಲಿ ಬ್ಯಾಟಿಂಗ್​ ಅಬ್ಬರ ತೋರಿಸುವ ವೇಳೆ ಕಾಲಿಗೆ ಗಾಯ ಮಾಡಿಕೊಂಡ ಬ್ರಾಂಡನ್​, ಪ್ರಥಮ ಚಿಕಿತ್ಸೆ ನೀಡಿದರೂ ಕೂಡ ಕ್ರೀಸ್​ನಲ್ಲಿ ನಿಂತು ಆಡಲು ಕಷ್ಟಪಟ್ಟರು. ತಕ್ಷಣವೇ ತಂಡ ಅವರನ್ನು ಡ್ರೆಸ್ಸಿಂಗ್ ರೂಮ್​ಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಕೊಡಿಸಿತು.

ಇದಾದ ಬಳಿಕ ಮುಂದಿನ ಪಂದ್ಯಗಳಲ್ಲಿ ಕಿಂಗ್ ವೆಸ್ಟ್​ ಇಂಡೀಸ್ ಪರ ಕಣಕ್ಕಿಳಿಯುವುದು ಬಹುತೇಕ ಡೌಟ್ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಲು ಪ್ರಾರಂಭಿಸಿತು. ಈ ವಿಷಯ ತೀವ್ರಗೊಳ್ಳುತ್ತಿದ್ದಂತೆ ಬ್ರಾಂಡನ್​ ಅವರ ಅನುಪಸ್ಥಿತಿ ತಂಡಕ್ಕೆ ಕಾಡಲಿದ್ಯಾ? ಮುಂದಿನ ಮ್ಯಾಚ್​ಗಳಲ್ಲಿ ಕಿಂಗ್ ಆಡಲಿದ್ದಾರಾ ಎಂಬ ಪ್ರಶ್ನೆಗೆ ಕ್ಯಾಪ್ಟನ್ ಪೋವೆಲ್ ಕೊಟ್ಟ ಉತ್ತರ ಹೀಗಿದೆ.

"ನಮ್ಮ ಚಿಂತೆಗಳ ಹೊರತಾಗಿಯೂ, ಕಿಂಗ್ ಮುಂಬರುವ ಪಂದ್ಯಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ನಾವು ಭರವಸೆ ಹೊಂದಿದ್ದೇವೆ. ಆದರೆ, ಅವರ ಶೀಘ್ರ ಚೇತರಿಕೆಯ ಮೇಲೆಯೇ ಸದ್ಯ ಎಲ್ಲವೂ ನಿಂತಿದೆ. ತಂಡಕ್ಕೆ ಕಿಂಗ್​ನ ಅವಶ್ಯಕತೆ ಅತ್ಯಂತ ಮಹತ್ವದ್ದಾಗಿದೆ ”ಎಂದು ವೆಸ್ಟ್ ಇಂಡೀಸ್ ನಾಯಕ ರೋವ್‌ಮನ್ ಪೊವೆಲ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net