

ನವದೆಹಲಿ: ಕಳೆದ ಬಾರಿ ನಡೆದ ಐಪಿಎಲ್ 17ನೇ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್, ತಮ್ಮದು ಐದು ಬಾರಿ ಚಾಂಪಿಯನ್ಸ್ ಪಟ್ಟ ಪಡೆದ ಬಲಿಷ್ಠ ತಂಡ ಎಂಬುದನ್ನು ಮರೆತು ಹೋಯಿತು ಎನ್ನುವಂತೆ ಫ್ಲಾಪ್ ಪ್ರದರ್ಶನ ನೀಡಿ, ಲೀಗ್ನಿಂದಲೇ ಹೊರಗುಳಿಯಿತು. ಅದರಲ್ಲೂ ಅಂಕಪಟ್ಟಿಯಲ್ಲಿ 10ನೇ ಸ್ಥಾನ ಗಳಿಸಿ, ಔಟ್ ಆಗಿದ್ದು ಎಂಐ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು. ಐದು ಬಾರಿ ಚಾಂಪಿಯನ್ಸ್ ಪಟ್ಟಕ್ಕೆ ಏರಿಸಿದ ರೋಹಿತ್ರನ್ನು ಕೈಬಿಟ್ಟು ಹಾರ್ದಿಕ್ಗೆ ತಂಡದ ಕ್ಯಾಪ್ಟನ್ಸಿ ಕೊಟ್ಟ ದಿನದಿಂದಲೂ ಶರ್ಮ ಮುಂದುವರಿಕೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಭುಗಿಲೆದ್ದಿದೆ.
36 ವರ್ಷದ ರೋಹಿತ್ ಶರ್ಮ 2011ರಿಂದ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಭಾಗವಾಗಿದ್ದು, ನಾಯಕರಾಗಿ ತಂಡಕ್ಕೆ 5 ಬಾರಿ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಇದರೊಟ್ಟಿಗೆ ಟೂರ್ನಿ ಇತಿಹಾಸದಲ್ಲಿ ತಂಡದ ಪರ ಗರಿಷ್ಠ ರನ್ ಬಾರಿಸಿದ ಮತ್ತು ಪಂದ್ಯವನ್ನಾಡಿದ ದಾಖಲೆ ಹೊಂದಿದ್ದಾರೆ. ಆದರೆ ಈ ಬಾರಿ ರೋಹಿತ್ರನ್ನು ನಾಯಕತ್ವದಿಂದ ಕೆಳಗಿಳಿಸಿದ ಮುಂಬೈ ಫ್ರಾಂಚೈಸಿ ಮಾಲೀಕರು, ಹೆಚ್ಚಿನ ಹಣದಾಸೆಯಿಂದ ಗುಜರಾತ್ ಟೈಟಾನ್ಸ್ ತಂಡಕ್ಕೆ ಕೈಕೊಟ್ಟ ಹಾರ್ದಿಕ್ಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಸ್ಥಾನ ನೀಡಿದರು. ಫ್ರಾಂಚೈಸಿಯ ಈ ನಡೆಗೆ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅದರಲ್ಲೂ ಆರಂಭಿಕ ಮೂರು ಪಂದ್ಯಗಳಲ್ಲಿ ಸತತ ಸೋಲಿನ ಬಳಿಕ ಈ ಟೀಕೆಗಳು ಮತ್ತಷ್ಟು ಹೆಚ್ಚಾದವು.
ಅಂದಿನಿಂದಲೂ ಫ್ರಾಂಚೈಸಿ ಬಗ್ಗೆ ಅಸಮಾಧಾನ ಹೊಂದಿರುವ ರೋಹಿತ್ ಶರ್ಮ, 2025ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವುದು ಬಹುತೇಕ ಡೌಟ್ ಎಂದೇ ಹೇಳಲಾಗಿತ್ತು. ಈ ಕುರಿತು ಸ್ವತಃ ರೋಹಿತ್ ಅವರೇ ಒಂದಷ್ಟು ಪಂದ್ಯಗಳ ಬಳಿಕ ಮೌನ ಮುರಿದಿದ್ದರು. ಇದೆಲ್ಲವೂ ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿತು. ಸದ್ಯ ರೋಹಿತ್ ಮತ್ತು ಹಾರ್ದಿಕ್ ನಡುವೆ ಅಂತಹ ವೈಮನಸ್ಸು ಇಲ್ಲದಿದ್ದರೂ, ತನ್ನ ಗಮನಕ್ಕೆ ಬಾರದಂತೆ ನಾಯಕ ಸ್ಥಾನದಿಂದ ಕೆಳಗಿಳಿಸಿದ ಫ್ರಾಂಚೈಸಿ ನಡೆಗೆ ರೋಹಿತ್ ಇಂದಿಗೂ ಬೇಸರ ಹೊಂದಿದ್ದಾರೆ. ಸದ್ಯ ಮುಂಬರುವ ಐಪಿಎಲ್ ಸೀಸನ್ ಆಕ್ಷನ್ ಸಮೀಪಿಸುತ್ತಿರುವ ಬೆನ್ನಲ್ಲೇ ಎಂಐ ಪರ ಶರ್ಮ ಆಡೋದು ಡೌಟ್ ಎಂಬ ಮಾತುಗಳು ಹೆಚ್ಚಾಗಿವೆ. ಈ ಎಲ್ಲಾ ಬೆಳವಣಿಗೆಯೆ ಮಧ್ಯೆ ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಕೊಟ್ಟ ಹೇಳಿಕೆ ಇದೀಗ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
"2025ರ ಐಪಿಎಲ್ ಆವೃತ್ತಿಗೆ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮರನ್ನು ಉಳಿಸಿಕೊಳ್ಳುವುದಿಲ್ಲ. ರೋಹಿತ್ಗೂ ಕೂಡ ತಂಡದಲ್ಲಿ ಆಡಲು ಇಷ್ಟವಿಲ್ಲ. ಐದು ಬಾರಿ ಚಾಂಪಿಯನ್ಸ್ ಪಟ್ಟ ಗೆದ್ದುಕೊಟ್ಟ ಶರ್ಮ ಮುಂಬೈ ಪರ ಆಡೋದಿಲ್ಲ. ಎಂಐ ಜತೆಗಿನ ಅವರ ಪ್ರಯಾಣ ಇಲ್ಲಿಗೆ ಮುಗಿದಿದೆ. ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ಫ್ರಾಂಚೈಸಿಯ ಟೇಬಲ್‌ನಲ್ಲಿ ಶರ್ಮ ಅನುಪಸ್ಥಿತಿ ಕಾಡಲಿದೆ. ಪ್ರಾಯಶಃ ಅವರು ಬೇರೋಂದು ತಂಡಕ್ಕೆ ಹೋಗುವ ಸಾಧ್ಯತೆಗಳೇ ಹೆಚ್ಚಿವೆ" ಎಂದು ಆಕಾಶ್ ಹೇಳಿದ್ದಾರೆ,(ಏಜೆನ್ಸೀಸ್).