ಅದೊಂದು ಪತ್ರ ನೋಡಿ ನನ್ನ ಕೈ-ಕಾಲು ನಡುಗಿತ್ತು! ಫ್ಯಾನ್​ ಕೊಟ್ಟ ಲೆಟರ್​ ಮರೆಯದ ವಿರಾಟ್​ ಹೇಳಿದ್ದಿಷ್ಟು

ವಿಜಯವಾಣಿ - 2024-09-09T194125.539
Published on

ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ, ದಾಖಲೆಗಳ ಸರದಾರ, ‘ರನ್ ಮಷಿನ್’​ ವಿರಾಟ್ ಕೊಹ್ಲಿ ಅಂದರೆ ಕ್ರಿಕೆಟ್ ಅಭಿಮಾನಿಗಳಿಗೆ ಅದೇನೋ ವಿಶೇಷ ಪ್ರೀತಿ, ಹುಚ್ಚು ಅಭಿಮಾನ. ಬ್ಯಾಟ್ ಹಿಡಿಯುವ ಕೊಹ್ಲಿ ಮೈದಾನಕ್ಕಿಳಿಯುತ್ತಿದ್ದಾರೆ ಎಂಬುದು ಗೊತ್ತಾದ್ರೆ ಸಾಕು ಸ್ಟೇಡಿಯಂ ಪೂರ ವಿರಾಟ್ ಹೆಸರು ಮೊಳಗಲಿದೆ. ಅಭಿಮಾನದ ಹೊಳೆ ಹರಿಸುವ ಫ್ಯಾನ್ಸ್​, ಭಾರತೀಯ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ ಎಂದು ವಿರಾಟ್​ರನ್ನು ಗುಣಗಾನ ಮಾಡುತ್ತಾರೆ. ವಿರಾಟ್​ರ ಆಟದ ವೈಖರಿ, ಸ್ಟೈಲಿಶ್ ಲುಕ್ ಹೀಗೆ ಹಲವು ವಿಷಯಗಳನ್ನು ಅನುಸರಿಸುವ ಫ್ಯಾನ್ಸ್​ಗಳು ತಮ್ಮ ನೆಚ್ಚಿನ ಸೆಲೆಬ್ರಿಟಿ ನೋಡಲು, ಮಾತನಾಡಿಸಲು ನಾನಾ ರೀತಿಯ ಕಸರತ್ತು ನಡೆಸುತ್ತಾರೆ. ಆದ್ರೆ, ಇಲೊಬ್ಬರು ಮಾತ್ರ ಕೊಹ್ಲಿಯನ್ನು ಸಂಪರ್ಕಿಸಲು ವಿಚಿತ್ರ ಪ್ರಯತ್ನ ಮಾಡಿದ್ದರಂತೆ. ಈ ಕುರಿತು ಸ್ವತಃ ಕೊಹ್ಲಿ ಅವರೇ ಹೇಳಿಕೊಂಡಿದ್ದಾರೆ.

ವಿಶ್ವ ಕ್ರಿಕೆಟ್​ ಹಾಗೂ ಟೀಮ್ ಇಂಡಿಯಾದ ಅತ್ಯುತ್ತಮ ಬ್ಯಾಟರ್​ ಆದ ವಿರಾಟ್ ಕೊಹ್ಲಿ ಜಗತ್ತಿನಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ. ಸಾಮಾಜಿಕ ಜಾಲತಾಣ ಸೇರಿದಂತೆ ಇತರೆ ಪ್ಲಾಟ್​ಫಾರ್ಮ್​​ಗಳಲ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ನೋಡುವ ತವಕ ವ್ಯಕ್ತಪಡಿಸುವ ಫ್ಯಾನ್ಸ್​, ಅವರ ಗಮನ ಸೆಳೆಯಲು ಸಾಕಷ್ಟು ವಿನೂತನ ಪ್ರಯತ್ನಗಳಲ್ಲಿ ತೊಡಗಿರುತ್ತಾರೆ. ಅಭಿಮಾನಿಗಳ ಚಿತ್ರ, ವಿಚಿತ್ರ ಸಂದೇಶಗಳನ್ನು ಸ್ವೀಕರಿಸುವ ವಿರಾಟ್​, ಒಂದೇ ಒಂದು ಪತ್ರ ನೋಡಿ ಭಾರೀ ಆತಂಕಕ್ಕೆ ಒಳಗಾಗಿದ್ದರಂತೆ.

"ಒಂದು ಕಾರ್ಯಕ್ರಮಕ್ಕೆ ಹೋಗಿದ್ದ ನಾನು, ಅದನ್ನು ಮುಗಿಸಿಕೊಂಡು ಮನೆಗೆ ಹೋಗುವಾಗ ಒಬ್ಬ ಅಭಿಮಾನಿ ನನ್ನ ಕಾರಿನ ಕಿಟಿಕಿಯೊಳಗೆ ತಾವು ಬರೆದಿದ್ದ ಪತ್ರವೊಂದನ್ನು ಎಸೆದು ಕಣ್ಮರೆಯಾದರು. ಅವರು ಕೊಟ್ಟ ಲೆಟರ್​ ತೆರೆದ ನನಗೆ ಕಾದಿದ್ದು ಭಾರೀ ಅಚ್ಚರಿ. ನಿಜಕ್ಕೂ ಅದನ್ನು ನೋಡಿದಾಗ ನನ್ನ ಕೈ ಮತ್ತು ಕಾಲುಗಳಲ್ಲಿ ನಡುಕ ಉಂಟಾಗಿತ್ತು. ಅಸಲಿಗೆ ಎಲ್ಲರಂತೆ ಸಾಮಾನ್ಯ ಇರಲಿಲ್ಲ ಈ ಅಭಿಮಾನಿ" ಎಂದರು.

"ನಾನು ಆತ ಕೊಟ್ಟ ಪತ್ರ ತೆರೆದು ನೋಡಿದಾಗ ಅದು ರಕ್ತದಿಂದ ಕೂಡಿತ್ತು. ಯಾರೋ ಆ ಲೆಟರ್​ ಅನ್ನು ತಮ್ಮ ರಕ್ತದಲ್ಲಿ ಬರೆದು ಕಳಿಸಿರುವುದು ತಿಳಿಯಿತು. ಒಂದು ನಿಮಿಷ ಬೆಚ್ಚಿಬಿದ್ದೆ. ಇದನ್ನು ನೋಡಿದ ಬಳಿಕ ನನಗನಿಸಿದ್ದು ಇದು ತೀರ ಅತಿರೇಕವಾಯಿತು. ನನಗೆ ಇಂತಹ ವಿಷಯಗಳು ಖುಷಿ ಪಡಿಸುವುದಿಲ್ಲ, ಬದಲಿಗೆ ತುಂಬ ಬೇಸರ ತರುತ್ತದೆ ಹಾಗೂ ಮತ್ತಷ್ಟು ಕೋಪ ಹೆಚ್ಚಿಸುತ್ತದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net