

ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದರು. ‘ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಪಿಚ್ ಯಾವ ರೀತಿ ಇರಬಹುದೆಂದು ಸೋಜಿಗವಾಗುತ್ತಿದೆ’ ಎಂದು ಅಡಿಬರಹವನ್ನೂ ಬರೆದಿದ್ದ ಆ ಚಿತ್ರದಲ್ಲಿ ರೋಹಿತ್ ಶರ್ಮ ಕ್ರಿಕೆಟ್ ಮೈದಾನದ ಮೇಲೆ ಮಲಗಿಕೊಂಡಿದ್ದರು. ಇದೀಗ ಟ್ವಿಟರ್‌ನಲ್ಲಿ ಈ ಚಿತ್ರ ಭರ್ಜರಿ ಟ್ರೋಲ್‌ಗಳಿಗೆ ಆಹಾರವಾಗಿದೆ.
ಈ ಚಿತ್ರವನ್ನು ಈಗ ನೆಟ್ಟಿಗರು ಎಡಿಟ್ ಮಾಡಿ ವಿವಿಧ ಸಂದರ್ಭಗಳಲ್ಲಿ ರೋಹಿತ್ ಅದೇ ರೀತಿ ಬಿದ್ದುಕೊಂಡಿರುವಂತೆ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಈ ಮೂಲಕ ರೋಹಿತ್ ಶರ್ಮ ಅವರ ಕಾಲೆಳೆದು ಭರ್ಜರಿ ಮಜಾ ತೆಗೆದುಕೊಳ್ಳುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದ ರೋಹಿತ್ ಶರ್ಮ, ಮೂರನೇ ಟೆಸ್ಟ್ ಪಂದ್ಯದಲ್ಲೂ ಅಮೂಲ್ಯ ಅರ್ಧಶತಕ ಸಿಡಿಸಿದ್ದರು. ಈ ಮೂಲಕ ಉಳಿದೆಲ್ಲ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆ ರೋಹಿತ್ ರನ್‌ಗಳಿಕೆ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಇದೀಗ ಮೈದಾನದ ಹೊರಗೂ ರೋಹಿತ್ ಶರ್ಮ ಕ್ರಿಕೆಟ್ ಪ್ರೇಮಿಗಳ ಗಮನಸೆಳೆಯುತ್ತಿದ್ದಾರೆ.