ಮದುವೆ ಸಿದ್ಧತೆಗಾಗಿ ಕ್ರಿಕೆಟ್‌ನಿಂದ ರಜೆ ಬಿಡುವು ಪಡೆದರೇ ಬುಮ್ರಾ?

bumrah web1
Published on

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ವೈಯಕ್ತಿಕ ಕಾರಣ ನೀಡಿ ಹೊರಗುಳಿದಿದ್ದಾರೆ. ಅಲ್ಲದೆ ಟಿ20 ಸರಣಿಯಿಂದಲೂ ವಿಶ್ರಾಂತಿ ಪಡೆದಿದ್ದಾರೆ. ಇದರಿಂದಾಗಿ, ಬುಮ್ರಾ ಯಾಕೆ ಕ್ರಿಕೆಟ್‌ನಿಂದ ಇಷ್ಟೊಂದು ಬಿಡುವು ಪಡೆದುಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆಮಾಡಿತ್ತು. ಅದಕ್ಕೀಗ ಉತ್ತರ ಲಭಿಸಿದೆ!

ಮದುವೆಯ ಸಿದ್ಧತೆಗಾಗಿ ಬುಮ್ರಾ ಕ್ರಿಕೆಟ್‌ನಿಂದ ಬಿಡುವು ಪಡೆದುಕೊಂಡಿದ್ದಾರೆ ಎಂದು ಇದೀಗ ಬಿಸಿಸಿಐ ಮೂಲಗಳು ತಿಳಿಸಿವೆ. 27 ವರ್ಷದ ಬುಮ್ರಾ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ಆದರೆ ಹುಡುಗಿ ಯಾರು ಎಂಬಿತ್ಯಾದಿ ಮಾಹಿತಿಗಳು ಇನ್ನೂ ಗೌಪ್ಯವಾಗಿವೆ.

‘ಬುಮ್ರಾ ಮದುವೆಯಾಗುತ್ತಿರುವ ಬಗ್ಗೆ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. ಮದುವೆಯ ಸಿದ್ಧತೆಗೆ ಸಹಾಯಕವೆನಿಸುವ ಕಾರಣದಿಂದಾಗಿ ಅವರು ಕ್ರಿಕೆಟ್‌ನಿಂದ ರಜೆ ಕೇಳಿದ್ದರು’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಗುಜರಾತ್‌ನ ಅಹಮದಾಬಾದ್ ಮೂಲದ ಬುಮ್ರಾ ತಮ್ಮ ವಿಶಿಷ್ಟವಾದ ಬೌಲಿಂಗ್ ಶೈಲಿಯಿಂದ ಈಗ ಟೀಮ್ ಇಂಡಿಯಾದ ಪ್ರಧಾನ ವೇಗದ ಬೌಲರ್ ಎನಿಸಿದ್ದಾರೆ. 2016ರಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ ಅವರು ಇದುವರೆಗೆ 18 ಟೆಸ್ಟ್, 67 ಏಕದಿನ ಮತ್ತು 50 ಟಿ20 ಪಂದ್ಯಗಳನ್ನು ಆಡಿದ್ದಾರೆ. 5ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಬುಮ್ರಾರನ್ನು, ಶಾಲಾ ಶಿಕ್ಷಕಿಯಾಗಿರುವ ಅವರ ತಾಯಿ ದಲ್ಜಿತ್ ಬುಮ್ರಾ ಒಬ್ಬರೆ ಬೆಳೆಸಿದ್ದರು ಮತ್ತು ಕ್ರಿಕೆಟ್ ಸಾಧನೆಗೆ ನೆರವಾಗಿದ್ದರು.

ಬುಮ್ರಾ ಹೆಸರು ಈ ಹಿಂದೆ ಕೆಲ ನಟಿಯರ ಜತೆ ಕೇಳಿಬಂದಿತ್ತು ಮತ್ತು ಅವರ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದೂ ವರದಿಗಳಾಗಿದ್ದವು. ಪ್ರಮುಖವಾಗಿ ದಕ್ಷಿಣ ಭಾರತದ ನಟಿ ಅನುಪಮಾ ಪರಮೇಶ್ವರನ್ ಜತೆಗೆ ಬುಮ್ರಾ ಹೆಸರು ತಳುಕುಹಾಕಿಕೊಂಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಅನುಪಮಾ ಪರಮೇಶ್ವರನ್ ಅವರು ಬುಮ್ರಾರನ್ನು ಹಿಂಬಾಲಿಸಲು ಆರಂಭಿಸಿದಾಗ ಈ ಸುದ್ದಿ ಹರಡಿತ್ತು. ದಕ್ಷಿಣ ಭಾರತದ ಮತ್ತೋರ್ವ ನಟಿ ರಾಶಿ ಖನ್ನಾ ಜತೆಗೂ ಅವರ ಹೆಸರು ಕೇಳಿಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net