ಐಸಿಸಿ ಫೆಬ್ರವರಿ ತಿಂಗಳ ಪ್ರಶಸ್ತಿ ರೇಸ್‌ನಲ್ಲಿದ್ದಾರೆ ಅಶ್ವಿನ್, ನೀವೂ ವೋಟ್ ಮಾಡಿ...

ashwin web
Published on

ದುಬೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬೌಲಿಂಗ್-ಬ್ಯಾಟಿಂಗ್ ಎರಡರಲ್ಲೂ ಮಿಂಚಿರುವ ಭಾರತದ ಆಫ್​ ಸ್ಪಿನ್ನರ್ ಆರ್. ಅಶ್ವಿನ್ ಐಸಿಸಿಯ ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಇಂಗ್ಲೆಂಡ್ ನಾಯಕ ಜೋ ರೂಟ್ ಮತ್ತು ವೆಸ್ಟ್ ಇಂಡೀಸ್‌ನ ಹೊಸ ಬ್ಯಾಟಿಂಗ್ ಸೆನ್ಸೇಶನ್ ಕೈಲ್ ಮೇಯರ್ಸ್‌ ಕೂಡ ಈ ಪ್ರಶಸ್ತಿ ರೇಸ್‌ನಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ 3 ಟೆಸ್ಟ್‌ಗಳಲ್ಲಿ ಅಶ್ವಿನ್ 24 ವಿಕೆಟ್‌ಗಳ ಜತೆಗೆ 1 ಶತಕ ಸಹಿತ 176 ರನ್ ಗಳಿಸಿದ್ದಾರೆ. ಇದೇ ವೇಳೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 400 ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳನ್ನು ಪೂರೈಸಿದ್ದರು. ರೂಟ್ ಭಾರತ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದರು. ಅಲ್ಲದೆ ಸರಣಿಯ 3 ಪಂದ್ಯಗಳಲ್ಲಿ ಒಟ್ಟು 333 ರನ್ ಮತ್ತು 6 ವಿಕೆಟ್ ಗಳಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಮೇಯರ್ಸ್‌ 210 ರನ್ ಸಿಡಿಸುವ ಮೂಲಕ ಚಿತ್ತಗಾಂಗ್‌ನಲ್ಲಿ ವೆಸ್ಟ್ ಇಂಡೀಸ್ ತಂಡ 395 ರನ್‌ಗಳ ದಾಖಲೆಯ ಚೇಸಿಂಗ್ ಮಾಡಲು ನೆರವಾಗಿದ್ದರು. ಈ ಪ್ರಶಸ್ತಿಯ ಮಹಿಳೆಯರ ವಿಭಾಗದಲ್ಲಿ ಇಂಗ್ಲೆಂಡ್‌ನ ಟಾಮಿ ಬೆಯುಮಂಟ್, ನ್ಯಾಟ್ ಸ್ಕೀವರ್ ಮತ್ತು ನ್ಯೂಜಿಲೆಂಡ್‌ನ ಬ್ರೂಕ್ ಹಾಲಿಡೇ ನಾಮನಿರ್ದೇಶನಗೊಂಡಿದ್ದಾರೆ.

ಪ್ರತಿ ತಿಂಗಳು ಅತ್ಯುತ್ತಮ ನಿರ್ವಹಣೆ ತೋರುವ ಆಟಗಾರರಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ಐಸಿಸಿ ಹಾಲಿ ವರ್ಷ ಹೊಸದಾಗಿ ಪರಿಚಯಿಸಿದ್ದು, ಕಳೆದ ಜನವರಿ ತಿಂಗಳಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಈ ಪ್ರಶಸ್ತಿ ಗೌರವ ಪಡೆದುಕೊಂಡಿದ್ದರು. ಕ್ರಿಕೆಟ್ ಪ್ರೇಮಿಗಳು ಕೂಡ ಐಸಿಸಿ ವೆಬ್‌ಸೈಟ್ ಮೂಲಕ ಪ್ರಶಸ್ತಿ ಆಕಾಂಕ್ಷಿಗಳಿಗೆ ಮತ ಚಲಾಯಿಸಬಹುದಾಗಿದ್ದು, ಇದು ಪ್ರಶಸ್ತಿ ವಿತರಣೆಯಲ್ಲಿ ಶೇ. 10ರಷ್ಟು ನಿರ್ಣಾಯಕ ಪಾತ್ರ ವಹಿಸಲಿದೆ. ಉಳಿದ ಶೇ. 90 ಭಾಗ ಐಸಿಸಿಯ ವೋಟಿಂಗ್ ಅಕಾಡೆಮಿಯ ಆಯ್ಕೆಯ ಅನ್ವಯ ನಿರ್ಧರಿಸಲ್ಪಡಲಿದೆ. ಪ್ರತಿ ತಿಂಗಳ 2ನೇ ಸೋಮವಾರ ಪ್ರಶಸ್ತಿ ವಿಜೇತರ ಹೆಸರನ್ನು ಐಸಿಸಿ ಪ್ರಕಟಿಸಲಿದೆ.

ಕೆಳಗಿನ ಐಸಿಸಿ ಟ್ವೀಟ್‌ನಲ್ಲಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ಐಸಿಸಿ ವೆಬ್‌ಸೈಟ್‌ಗೆ ತೆರಳಿ ನೀವೂ ಕೂಡ ಆರ್. ಅಶ್ವಿನ್ ಅವರಿಗೆ ಮತ ಚಲಾಯಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net