

Rohit Sharma: ಮಾ.09 ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ 4 ವಿಕೆಟ್ಗಳಿಂದ ನ್ಯೂಜಿಲೆಂಡ್ ಎದುರು ಗೆದ್ದು ಬೀಗಿತು. ಈ ಮೂಲಕ ಭಾರತವು ಮೂರು ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಫೈನಲ್‌ನಲ್ಲಿ ನ್ಯೂಜಿಲೆಂಡ್ ಬಗ್ಗುಬಡಿಯಲು ಯಶಸ್ವಿಯಾದ ರೋಹಿತ್ ಶರ್ಮ ಪಡೆ, ಪ್ರತಿಷ್ಠಿತ ಐಸಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು ಇತಿಹಾಸ. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸುವ ಮೊದಲು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸತತ ಗೆಲುವು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಪ್ರಾಬಲ್ಯ ಸಾಧಿಸಿತು.
ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟ ನಂತರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಕ್ಯಾಪ್ಟನ್ ರೋಹಿತ್ ಶರ್ಮ, ಒಂದು ಹಾಸ್ಯ ಕ್ಷಣಕ್ಕೆ ಕಾರಣವಾದ ಘಟನೆ ನೋಡುಗರನ್ನು ನಗೆಗಡಲಿಗೆ ದೂಡಿದೆ. ಟೀಮ್ ಇಂಡಿಯಾ ಗೆಲುವಿನ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ರೋಹಿತ್, ಎದ್ದು ಹೋಗುವ ವೇಳೆ ತಮ್ಮ ಮೊಬೈಲ್ ಕೈಗೆತ್ತಿಕೊಂಡರೆ ವಿನಃ ಚಾಂಪಿಯನ್ಸ್ ಟ್ರೋಫಿಯನ್ನು ತೆಗೆದುಕೊಂಡು ಹೋಗಲಿಲ್ಲ. ರೋಹಿತ್ ಮರೆತು ಹೋಗ್ತಿದ್ದಂತೆ ಅಲ್ಲೇ ಇದ್ದ ವ್ಯಕ್ತಿಯೊಬ್ಬರು, ಟ್ರೋಫಿಯನ್ನು ಕ್ಯಾಪ್ಟನ್ ಕೈಗೆ ಹಸ್ತಾಂತರಿಸಿದ್ದಾರೆ. ಈ ವಿಡಿಯೋ ಕ್ಷಣಮಾತ್ರದಲ್ಲಿ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಾಂಪಿಯನ್ಸ್ ಟ್ರೋಫಿ ಮುಕ್ತಾಯಗೊಳ್ಳುತ್ತಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಾದರಿಗೆ ರೋಹಿತ್ ನಿವೃತ್ತಿ ಘೋಷಿಸುತ್ತಾರೆ ಎಂಬ ವದಂತಿಗಳು, ಚರ್ಚೆಗಳು ವ್ಯಾಪಕವಾಗಿ ಹರಿದಾಡುತ್ತಿತ್ತು. ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ ರೋಹಿತ್ ಶರ್ಮ, "ಇಲ್ಲಿ ನಾನು ಒಂದು ವಿಷಯವನ್ನು ಸ್ಪಷ್ಟಪಡಿಸಲು ಇಚ್ಚಿಸುವೆ. ಈ ಫಾರ್ಮೆಟ್ನಿಂದ ನಿವೃತ್ತಿ ಪಡೆಯುತ್ತಿಲ್ಲ. ಇನ್ನಷ್ಟು ವರ್ಷಗಳ ಕಾಲ ಆಡುವ ಬಯಕೆಯಿದೆ. ಇದೇ ಹಾದಿಯಲ್ಲಿ ಸಾಗುತ್ತೀನಿ. ಸುಖಾಸುಮ್ಮನೆ ಊಹಾಪೋಹಗಳನ್ನು ಹಬ್ಬಿಸಬೇಡಿ. ಅದಕ್ಕಾಗಿಯೇ ಮೊದಲೇ ಸ್ಪಷ್ಟನೆ ನೀಡುತ್ತಿದ್ದೇನೆ" ಎಂದು ಹೇಳಿದರು,(ಏಜೆನ್ಸೀಸ್).