ಮಕ್ಕಳಿಗೆ ವಿಷ ಉಣಿಸಿ ಆತ್ಮಹತ್ಯೆಗೆ ಶರಣಾದ ದಂಪತಿ; ಒಂದೇ ಕುಟುಂಬದ ನಾಲ್ವರ ಸಾವಿಗೆ ಕಾರಣ ಒಂದೇ! | Family

ವಿಜಯವಾಣಿ - 2025-03-11T120306.076
Published on

ಹೈದರಾಬಾದ್: ಒಂದೇ ಕುಟುಂಬದ ನಾಲ್ವರು ದುರಂತ ಅಂತ್ಯ (Family Death) ಕಂಡ ಘಟನೆ ಸೋಮವಾರ (ಮಾ.10) ರಾತ್ರಿ ಉಸ್ಮಾನಿಯಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ನೇಣು ಬಿಗಿದ ಸ್ಥಿತಿಯಲ್ಲಿ ದಂಪತಿಗಳ ಶವ ಪತ್ತೆಯಾದರೆ, ಇಬ್ಬರು ಮಕ್ಕಳು ವಿಷಪ್ರಾಶನದಿಂದ ಪ್ರಾಣಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಉಸ್ಮಾನಿಯಾ ವಿಶ್ವವಿದ್ಯಾಲಯ ವ್ಯಾಪ್ತಿಯ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಚುರುಕು ತನಿಖೆ ಕೈಗೊಂಡಿದ್ದಾರೆ.

ನಾಗರ್ಕರ್ನೂಲ್ ಜಿಲ್ಲೆಯ ಕಲ್ವಕುರ್ತಿ ಮಂಡಲದ ಮೊಕುರಲ್‌ನ ಚಂದ್ರಶೇಖರ್ ರೆಡ್ಡಿ (40) ಮತ್ತು ಕವಿತಾ ರೆಡ್ಡಿ (35) ದಂಪತಿಗಳು ಹಬ್ಸಿಗುಡದ ಮಹೇಶ್ವರನಗರದ ಸೇಂಟ್ ಜೋಸೆಫ್ ಶಾಲೆಯ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈ ದಂಪತಿಗಳಿಗೆ ಶ್ರೀತಾ ರೆಡ್ಡಿ (13) ಮತ್ತು ವಿಶ್ವಂತ್ ರೆಡ್ಡಿ (10) ಎಂಬ ಇಬ್ಬರು ಮಕ್ಕಳಿದ್ದರು. ಮಕ್ಕಳಿಗೆ ವಿಷ ಉಣಿಸಿ, ತಾವಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸ್ಥಳೀಯರಲ್ಲಿ ಭಾರೀ ಆಘಾತ ತಂದೊಡ್ಡಿದೆ. ಚಂದ್ರಶೇಖರ್ ರೆಡ್ಡಿ ಈ ಹಿಂದೆ ನಾರಾಯಣ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ ಆರು ತಿಂಗಳಿನಿಂದ ಕೆಲಸವಿಲ್ಲದ ಕಾರಣ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು ಎಂದು ಸ್ಥಳೀಯರು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ರಾತ್ರಿ ಸಂಬಂಧಿಕರು ಫೋನ್ ಮಾಡಿ ದಂಪತಿಗಳನ್ನು ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಮನೆಯಲ್ಲಿ ಯಾರೂ ಸಹ ಫೋನ್ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ತಕ್ಷಣವೇ ಮನೆಗೆ ಧಾವಿಸಿ ನೋಡಿದಾಗ ಚಂದ್ರಶೇಖರ್ ರೆಡ್ಡಿ ಮತ್ತು ಕವಿತಾ ರೆಡ್ಡಿ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಇಬ್ಬರೂ ಮಕ್ಕಳು ಒಂದೇ ಕೋಣೆಯಲ್ಲಿ ಹಾಸಿಗೆಯ ಮೇಲೆ ಮೃತಪಟ್ಟಿರುವುದು ಪತ್ತೆಯಾಗಿದೆ. ಈ ಆಘಾತಕಾರಿ ದೃಶ್ಯ ಕಂಡ ಸಂಬಂಧಿಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ನಾಲ್ವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಘಟನೆಯ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ದಂಪತಿಗಳು ಆರ್ಥಿಕ ಮುಗ್ಗಟ್ಟಿನಿಂದ ತೀವ್ರ ಪರದಾಡುತ್ತಿದ್ದರು ಜತೆಗೆ ಸಾಲ ಭಾಧೆಯನ್ನು ಎದುರಿಸುತ್ತಿದ್ದರು ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net