

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಐದನೇ ಪಂದ್ಯದಲ್ಲಿ ಪ್ರವಾಸಿ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಲಂಚ್ ಬ್ರೇಕ್ ವೇಳೆಗೆ 3 ವಿಕೆಟ್ ನಷ್ಟಕ್ಕೆ 64 ರನ್ಗಳಿಸಿದೆ. ಇನ್ನೂ ಸರಣಿಯ ಅಂತಿಮ ಪಂದ್ಯಕ್ಕೆ ಸಂಬಂಧಿಸಿದಂತೆ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ರೋಹಿತ್ ಶರ್ಮ, ಆಕಾಶ್ದೀಪ್ ಬದಲಾಗಿ ಶುಭಮನ್ ಗಿಲ್ ಹಾಗೂ ಪ್ರಸಿದ್ಧ್ ಕೃಷ್ಣಗೆ ಸ್ಥಾನ ನೀಡಲಾಗಿದೆ. ಜಸ್ಪ್ರೀತ್ ಬುಮ್ರಾ (Jasprit Bumrah) ತಂಡವನ್ನು ಮುನ್ನಡೆಸುತ್ತಿದ್ದಾರೆ.
ಇನ್ನೂ ಸರಣಿಯ ಅಂತಿಮ ಪಂದ್ಯದಲ್ಲಿ ರೋಹಿತ್ ಶರ್ಮರನ್ನು (Rohit Sharma) ತಂಡದಿಂದ ಕೈ ಬಿಡಲಾಗಿದ್ದು, ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಈ ಮೊದಲು ರೋಹಿತ್ ಶರ್ಮಗೆ ತಂಡದಲ್ಲಿ ಸ್ಥಾನ ಸಿಗುವುದು ಡೌಟ್ ಎಂದು ಹೇಳಲಾಗಿತ್ತು. ಆದರೆ, ಅಂತಿಮ ಕ್ಷಣದವರೆಗೂ ಯಾವುದು ಅಧಿಕೃತವಾಗಿರಲಿಲ್ಲ. ಹೀಗಾಗಿ ರೋಹಿತ್ ಶರ್ಮ ಸರಣಿಯ ಅಂತಿಮ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗಿತ್ತು.
ಈ ಬಗ್ಗೆ ಮಾತನಾಡಿರುವ ನಾಯಕ ಜಸ್ಪ್ರೀತ್ ಬುಮ್ರಾ (Jasprit Bumrah) ಹಿಟ್ಮ್ಯಾನ್ ಸರಣಿಯ ಕೊನೆ ಪಂದ್ಯವನ್ನು ಯಾಕೆ ಆಡುತ್ತಿಲ್ಲ ಎಂಬುದರ ಬಗ್ಗೆ ವಿವರಿಸಿದ್ದಾರೆ. ನಮ್ಮ ಕ್ಯಾಪ್ಟನ್ ನಾಯಕತ್ವದ ಗುಣಗಳನ್ನು ತೋರಿಸಿದ್ದು, ಸ್ವತಃ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ ಎಂದು ಹೇಳುವ ಮೂಲಕ ಎದ್ದಿರುವ ಊಹಾಪೋಹಗಳಿಗೆ ಜಸ್ಪ್ರೀತ್ ಬುಮ್ರಾ (Jasprit Bumrah) ತೆರೆ ಎಳೆಯುವ ಕೆಲಸ ಮಾಡಿದ್ದಾರೆ.
ಪಿತೃತ್ವದ ರಜೆ ಹಿನ್ನೆಲೆ ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮ (Rohit Sharma) ಗೈರಾಗಿದ್ದರು. ರೋಹಿತ್ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) ತಂಡವನ್ನು ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ಭಾರತ 295 ರನ್ಗಳ ಭರ್ಜರಿ ಜಯ ಗಳಿಸಿತ್ತು. ಸರಣಿಯ ಎರಡನೇ ಪಂದ್ಯದಿಂದ ತಂಡವನ್ನು ಮುನ್ನಡೆಸಿದ ಹಿಟ್ಮ್ಯಾನ್ ಪ್ರಸ್ತುತ ಸರಣಿಯಲ್ಲಿ 31ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಸರಣಿಯ ಕೊನೆ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಭಾರತ ತಂಡವಿದ್ದು, ಏನೆಲ್ಲಾ ಆಗಲಿದೆ ಎಂದು ಕಾದು ನೋಡಬೇಕಿದೆ.