IPL 2025: ರೋಹಿತ್ ಶರ್ಮ ಮುಂಬೈ ಇಂಡಿಯನ್ಸ್​ ತೊರೆಯುವುದು ಖಚಿತ! ಈ ಫ್ರಾಂಚೈಸಿ ಪಾಲಾಗುವುದು ನಿಶ್ಚಿತ?

rohit will join these franchise
Published on

ನವದೆಹಲಿ: ಈ ವರ್ಷದಲ್ಲಿ ನಡೆದ ಐಪಿಎಲ್ 17ನೇ ಆವೃತ್ತಿಯಲ್ಲಿ (IPL 2025) ಅತ್ಯಂತ ಕಳಪೆ ಪ್ರದರ್ಶನ ತೋರಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್, ತಮ್ಮದು ಐದು ಬಾರಿ ಚಾಂಪಿಯನ್ಸ್ ಪಟ್ಟ ಪಡೆದ ಬಲಿಷ್ಠ​ ತಂಡ​ ಎಂಬುದನ್ನು ಮರೆತು ಹೋಯಿತು ಎನ್ನುವಂತೆ ಫ್ಲಾಪ್​ ಪ್ರದರ್ಶನ ನೀಡಿ, ಲೀಗ್​ನಿಂದಲೇ ಹೊರಗುಳಿಯುವಂತೆ ಮಾಡಿದರು. ಅದರಲ್ಲೂ ಅಂಕಪಟ್ಟಿಯಲ್ಲಿ 10ನೇ ಸ್ಥಾನ ಗಳಿಸಿ, ಔಟ್ ಆಗಿದ್ದು ಎಂಐ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು. ಐದು ಬಾರಿ ಚಾಂಪಿಯನ್ಸ್​ ಪಟ್ಟಕ್ಕೆ ಏರಿಸಿದ ರೋಹಿತ್​ರನ್ನು (Rohit Sharma) ಕೈಬಿಟ್ಟು ಹಾರ್ದಿಕ್​ಗೆ ತಂಡದ ಕ್ಯಾಪ್ಟನ್ಸಿ ಕೊಟ್ಟ ದಿನದಿಂದಲೂ ಶರ್ಮ ಮುಂದುವರಿಕೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಯೇ ಭುಗಿಲೆದ್ದಿದೆ.

ಕ್ಯಾಪ್ಟನ್ಸಿ ಕಸಿದ ಹಾರ್ದಿಕ್​

36 ವರ್ಷದ ರೋಹಿತ್​ ಶರ್ಮ 2011ರಿಂದ ಮುಂಬೈ ಇಂಡಿಯನ್ಸ್​ ತಂಡದ ಪ್ರಮುಖ ಭಾಗವಾಗಿದ್ದು, ನಾಯಕರಾಗಿ ತಂಡಕ್ಕೆ 5 ಬಾರಿ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಇದರೊಟ್ಟಿಗೆ ಟೂರ್ನಿ ಇತಿಹಾಸದಲ್ಲಿ ತಂಡದ ಪರ ಗರಿಷ್ಠ ರನ್​ ಬಾರಿಸಿದ ಮತ್ತು ಪಂದ್ಯವನ್ನಾಡಿದ ದಾಖಲೆ ಹೊಂದಿದ್ದಾರೆ. ಆದರೆ ಈ ಬಾರಿ ರೋಹಿತ್​ರನ್ನು ನಾಯಕತ್ವದಿಂದ ಕೆಳಗಿಳಿಸಿದ ಮುಂಬೈ ಫ್ರಾಂಚೈಸಿ ಮಾಲೀಕರು, ಹೆಚ್ಚಿನ ಹಣದಾಸೆಯಿಂದ ಗುಜರಾತ್​ ಟೈಟಾನ್ಸ್​ ತಂಡಕ್ಕೆ ಕೈಕೊಟ್ಟ ಹಾರ್ದಿಕ್​ಗೆ ಮುಂಬೈ ಇಂಡಿಯನ್ಸ್​ ತಂಡದ ನಾಯಕ ಸ್ಥಾನ ನೀಡಿದರು. ಫ್ರಾಂಚೈಸಿಯ ಈ ನಡೆಗೆ ಕ್ರಿಕೆಟ್​ ಅಭಿಮಾನಿಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಸದ್ಯ ಇದೇ ಕಾರಣದಿಂದ ರೋಹಿತ್​​ 2025ರ ಐಪಿಎಲ್​ ಆವೃತ್ತಿಯಲ್ಲಿ ಎಂಐ ಪರ ಆಡುವುದಿಲ್ಲ ಎಂಬ ಸುದ್ದಿಗಳು ಸದ್ಯ ವ್ಯಾಪಕವಾಗಿ ಸದ್ದು ಮಾಡುತ್ತಿವೆ.

ಎಲ್​ಎಸ್​ಜಿ ಸೇರ್ಪಡೆ

ಐಪಿಎಲ್​ 2025ರ ಹರಾಜು ಪ್ರಕ್ರಿಯೆಯಲ್ಲಿ ರೋಹಿತ್ ಶರ್ಮ ಮುಂಬೈ ಇಂಡಿಯನ್ಸ್ ತೊರೆಯಲು ವೈಯಕ್ತಿಕವಾಗಿ ನಿರ್ಧರಿಸಿದ್ದಾರೆ ಎನ್ನಲಾಗಿದ್ದೇ ಆದರೂ ಫ್ರಾಂಚೈಸಿ ಕೂಡ ಅವರನ್ನು ಉಳಿಸಿಕೊಳ್ಳಲು ಹೆಚ್ಚು ಚಿಂತನೆ ನಡೆಸಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕ್ಯಾಪ್ಟನ್ ರೋಹಿತ್ ಶರ್ಮರನ್ನು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಖರೀದಿ ಮಾಡಲಿದೆ ಎಂಬ ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿದ್ದರೆ, ಮತ್ತೊಂದೆಡೆ ರೋಹಿತ್​ ಲಖನೌ ಸೂಪರ್ ಜೈಂಟ್ಸ್​ ಪಾಲಾಗಲಿದ್ದಾರೆ ಎನ್ನಲಾಗಿದೆ. 'ಹಿಟ್​ಮ್ಯಾನ್'​ ಕ್ಯಾಪ್ಟನ್ಸಿ ಮತ್ತು ಬ್ಯಾಟಿಂಗ್​ ವೈಖರಿ ತಂಡಕ್ಕೆ ದೊಡ್ಡ ಬಲ ನೀಡಲಿದೆ ಎಂದು ಲೆಕ್ಕಾಚಾರ ಹಾಕಿಕೊಂಡಿರುವ ಎಲ್​ಎಸ್​ಜಿ, ರೋಹಿತ್​ರನ್ನು ಯಾವುದೇ ಕಾರಣಕ್ಕೂ ಆಕ್ಷನ್​ನಲ್ಲಿ ಬಿಟ್ಟುಕೊಡಬಾರದು ಎಂದು ನಿರ್ಧರಿಸುವುದಾಗಿ ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net