

ಮುಂಬೈ: ಕರಣ್ ಜೋಹರ್ ಚಿತ್ರ ನಿರ್ದೇಶನಕ್ಕೆ ಮರಳಿರುವುದು, ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದಲ್ಲಿ ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಎಂಬ ಚಿತ್ರ ನಿರ್ದೇಶಿಸಿರುವುದು, ಆ ಚಿತ್ರ 2023ರ ಫೆಬ್ರವರಿಯಲ್ಲಿ ಬಿಡುಗಡೆಯಾಗುತ್ತಿರುವುದು ಗೊತ್ತಿರುವ ವಿಷಯವೇ. ಈಗ ಆ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಫೆಬ್ರವರಿಯ ಬದಲು ಏಪ್ರಿಲ್ನಲ್ಲಿ ಬಿಡುಗಡೆಯಾಗಲಿದೆ. ಈ ಸಂಬಂಧ ಇನ್ಸ್ಟಾಗ್ರಾಂನಲ್ಲಿ ಇಷ್ಟುದ್ಧ ಪತ್ರ ಬರೆದಿದ್ದಾರೆ ಕರಣ್.
ಏಳು ವರ್ಷಗಳ ನಂತರ ನನ್ನ ಮೊದಲ ಪ್ರೀತಿಯಾದ ನಿರ್ದೇಶನಕ್ಕೆ ಮರಳಿದ್ದೇನೆ. ಈ ಚಿತ್ರದಲ್ಲಿ ಹಲವು ಪ್ರತಿಭಾವಂತ ನಟ-ನಟಿಯರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ದೊಡ್ಡ ತಾರಾಗಣ, ಅದ್ಭುತ ಹಾಡುಗಳು ಮತ್ತು ಮನಮುಟ್ಟುವ ಕಥೆ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ. ಈ ಚಿತ್ರವು 2023ರ ಏಪ್ರಿಲ್ 28ರಂದು ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ.
‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಚಿತ್ರದಲ್ಲಿ ರಣವೀರ್ ಮತ್ತು ಆಲಿಯಾ ಜತೆಗೆ ಹಿರಿಯ ನಟರಾದ ಧರ್ಮೇಂದ್ರ, ಜಯಾ ಬಚ್ಚನ್, ಶಬನಾ ಆಜ್ಮಿ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಮುಂಬೈ, ದೆಹಲಿ ಮುಂತಾದ ಕಡೆ ಚಿತ್ರೀಕರಣ ಮುಗಿದಿದ್ದು, ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.