

ಟೆಲ್ ಅವಿವ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಸ್ರೇಲ್ನಿಂದ ನಿರ್ಗಮಿಸುತ್ತಿದ್ದಂತೆ ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ ರಾಕೆಟ್ ದಾಳಿ ತೀವ್ರತೆ ಪಡೆದುಕೊಂಡಿದೆ. ಹಮಾಸ್ ಮತ್ತು ಪ್ಯಾಲೆಸ್ತೀನ್ನ ಇಸ್ಲಾಮಿಕ್ ಜಿಹಾದಿ ಗುಂಪುಗಳಿಂದ ದಾಳಿ ನಡೆಯುತ್ತಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ.
ಗಾಜಾ ಮೇಲೆ ಇಸ್ರೇಲ್ ಘೋಷಿಸಿದ 'ಸಂಪೂರ್ಣ ಮುತ್ತಿಗೆ' ಸದ್ಯ ಕೊಂಚ ಬಿಡುವು ಪಡೆಯುವ ಸಾಧ್ಯತೆ ಇದೆ. ರಫಾ ಗಡಿಯ ಮೂಲಕ ಗಾಜಾವನ್ನು ಪ್ರವೇಶಿಸಲು ಸ್ಥಳೀಯರಿಗೆ ಸೀಮಿತ ಸಹಾಯ ಮಾಡುವುದಾಗಿ ಇಸ್ರೇಲ್ ತಿಳಿಸಿದೆ. ಅಲ್ಲದೆ, ಯುದ್ಧಪೀಡಿತ ಪ್ರದೇಶಕ್ಕೆ ಆಹಾರ, ನೀರು ಹಾಗೂ ಇತರೆ ಪೂರೈಕೆಗಳನ್ನು ಸರಬರಾಜು ಮಾಡಲು ಬೆಂಜಮಿನ್ ನೇತನ್ಯಾಹು ಒಪ್ಪಿಕೊಂಡಿದ್ದಾರೆ. ನಿನ್ನೆ (ಅ.18) ಇಸ್ರೇಲ್ಗೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮನವಿಯಂತೆ ಗಾಜಾಗೆ ಸೀಮಿತ ಅಗತ್ಯಗಳನ್ನು ಪೂರೈಸಲು ನೇತನ್ಯಾಹು ಅನುಮತಿಸಿದ್ದಾರೆ.
ಇಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಇಸ್ರೇಲ್ಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ನೇತನ್ಯಾಹು ಮತ್ತು ಅಧ್ಯಕ್ಷ ಇಸಾಲ್ ಹೆರ್ಜಾಗ್ ಅವರನ್ನು ಭೇಟಿಯಾಗಿ ಯುದ್ಧದ ಪರಿಸ್ಥಿತಿಯ ಬಗ್ಗೆ ಚರ್ಚಿಸಲಿದ್ದಾರೆ.
ನಿನ್ನೆ ಗಾಜಾದ ಆಸ್ಪತ್ರೆಯ ಮೇಲೆ ನಡೆದ ರಾಕೆಟ್ ದಾಳಿಯಲ್ಲಿ 500ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಇಸ್ರೇಲ್ ಮತ್ತು ಹಮಾಸ್ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದೆ. ಆದರೆ, ಈ ದಾಳಿಯ ಹಿಂದೆ ಇಸ್ರೇಲ್ ಎಂಬುದು ನಮ್ಮ ಗುಪ್ತಚರ ವರದಿಗಳು ಖಚಿತಪಡಿಸಿವೆ ಎಂದು ಅಮೆರಿಕ ತಿಳಿಸಿದೆ. ಇನ್ನು ಇಸ್ರೇಲ್ ಅಧಿಕಾರಿಗಳು ಗಾಜಾ ಭೂ ಆಕ್ರಮಣದ ಬಗ್ಗೆ ಯಾವುದೇ ತಾಜಾ ಕಾಮೆಂಟ್ಗಳನ್ನು ಮಾಡದಿದ್ದರೂ, ಗಾಜಾದ ಆಕ್ರಮಣಕ್ಕಾಗಿ ಅಮೆರಿಕ, ಇಸ್ರೇಲ್ಗೆ ತನ್ನ ಬೆಂಬಲ ನೀಡಿದೆ ಎಂದು ವರದಿಗಳು ಹೇಳಿವೆ.
ಅಕ್ಟೋಬರ್ 7ರಂದು ಮುಂಜಾನೆ ಹಮಾಸ್ ಉಗ್ರರು 5000 ರಾಕೆಟ್ಗಳಿಂದ ಇಸ್ರೇಲ್ ಮೇಲೆ ದಿಢೀರ್ ದಾಳಿ ಮಾಡಿದರು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಹಮಾಸ್ ಉಗ್ರರ ಮೇಲೆ ದಾಳಿ ನಡೆಸಿದ್ದು, ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಮುಂದುವರಿದಿದೆ. ಸದ್ಯ ಎರಡೂ ಕಡೆಗಳಿಂದ 4 ಸಾವಿರಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ.
ಈಜಿಪ್ತ್ಗೆ ಅನುಮತಿ
ರಫಾ ಗಡಿಯ ಮೂಲಕ ಗಾಜಾ ಪಟ್ಟಿಗೆ ಸೀಮಿತ ಪ್ರಮಾಣದ ಮಾನವೀಯ ನೆರವು ನೀಡಲು ಈಜಿಪ್ಟ್‌ಗೆ ಅವಕಾಶ ನೀಡುವುದಾಗಿ ಇಸ್ರೇಲ್ ಸರ್ಕಾರ ಘೋಷಿಸಿದೆ. ಯುಎಸ್ ಅಧ್ಯಕ್ಷ ಜೋ ಬಿಡನ್ ಅವರ ಮನವಿ ಹಿನ್ನೆಲೆ ಈ ನಿರ್ಧಾರವನ್ನು ಅನುಮೋದಿಸಲಾಗಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ. ಇತ್ತೀಚಿನ ವರದಿಗಳ ಪ್ರಕಾರ ಅಗತ್ಯ ವಸ್ತುಗಳುಳ್ಳ 20 ಟ್ರಕ್‌ಗಳು ದಕ್ಷಿಣ ಗಾಜಾವನ್ನು ಪ್ರವೇಶಿಸಲು ಅನುಮತಿಸಲಾಗಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)