More

    ಮತ್ತೆ ಹೋರಾಟಕ್ಕೆ ಮರಳುತ್ತೇವೆ: ಸುಪ್ರೀಂಕೋರ್ಟ್​ ಮುಂದೆಯೇ ನಿಶ್ಚಿತಾರ್ಥ ಮಾಡಿಕೊಂಡ ಸಲಿಂಗ ಜೋಡಿ!

    ನವದೆಹಲಿ: ಭಾರತದಲ್ಲಿ ಸಲಿಂಗ ವಿವಾಹದ ಮಾನ್ಯತೆ ಕುರಿತು ಸುಪ್ರೀಂಕೋರ್ಟ್​ ನೀಡಿದ ತೀರ್ಪಿನ ಬಗ್ಗೆ ಲಂಡನ್​ ಸ್ಕೂಲ್​ ಆಫ್​ ಎಕನಾಮಿಕ್ಸ್​ನಲ್ಲಿ ಪಿಎಚ್​ಡಿ ವಿದ್ಯಾರ್ಥಿಯಾಗಿರುವ ಅನನ್ಯ ಕೊಟಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್​ ನೆಟ್ಟಿಗರ ಗಮನ ಸೆಳೆದಿದೆ.

    ಮುಖ್ಯನ್ಯಾಯಮುರ್ತಿ ಡಿವೈ ಚಂದ್ರಚೂಡ್​ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್. ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ.ಎಸ್. ನರಸಿಂಹ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠ ಮಂಗಳವಾರ (ಅ.17) ತೀರ್ಪು ಪ್ರಕಟಿಸಿ, ಸಲಿಂಗ ವಿವಾಹಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ಹೇಳಿತು. ಈ ವಿಚಾರದಲ್ಲಿ ಸಂಸತ್ತು ತೀರ್ಮಾನಿಸಬೇಕು ಮತ್ತು ಹೊಸ ವಿವಾಹ ವ್ಯವಸ್ಥೆಯನ್ನು ರಚಿಸುವಂತೆ ಸಂಸತ್ತು ಅಥವಾ ಸರ್ಕಾರವನ್ನು ನಾವು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸಲಿಂಗ ವಿವಾಹ ಮಾನ್ಯತೆಯ ನಿರ್ಧಾರವನ್ನು ನ್ಯಾಯಾಲಯ ಸರ್ಕಾರಕ್ಕೆ ಬಿಟ್ಟಿದೆ.

    ಇದೀಗ ಕೋರ್ಟಿನ ತೀರ್ಪಿನ ಬಗ್ಗೆ ಅನನ್ಯ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಸಂಗಾತಿ ಉತ್ಕರ್ಷ್​ ಸಕ್ಸೆನಾ ಜತೆ ಸುಪ್ರೀಂಕೋರ್ಟ್​ ಆವರಣಕ್ಕೆ ತೆರಳಿ, ಕೋರ್ಟ್​ ಮುಂದೆ ಮಂಡಿಯೂರಿ ನಿಶ್ಚಿತಾರ್ಥದ ರಿಂಗ್​ ವಿನಿಮಯ ಮಾಡಿಕೊಂಡ ಫೋಟೋವನ್ನು ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್​ ಮಾಡಿರುವ ಫೋಟೋದಲ್ಲಿ ವಕೀಲರಾಗಿರುವ ಉತ್ಕರ್ಷ್​ ಸಕ್ಸೆನಾ ಮಂಡಿಯೂರಿ ಅನನ್ಯಗೆ ರಿಂಗ್​ ತೊಡಿಸುತ್ತಿದ್ದಾರೆ. ಇದು ಸಂಬಂಧದ ಮೇಲಿನ ಅವರಿಬ್ಬರ ಬದ್ಧತೆಯನ್ನು ಸೂಚಿಸುತ್ತದೆ.

    ಈ ಬಗ್ಗೆ ಎಕ್ಸ್​ನಲ್ಲಿ ಬರೆದುಕೊಂಡಿರುವ ಅನನ್ಯ, ಕೋರ್ಟ್​ ತೀರ್ಪು ನಿಜಕ್ಕೂ ಘಾಸಿ ಉಂಟು ಮಾಡಿತು. ಇಂದು ಉತ್ಕರ್ಷ್​ ಸಕ್ಸೆನಾ ಮತ್ತು ನಾನು ನಮ್ಮ ಹಕ್ಕನ್ನು ನಿರಾಕರಿಸಿದ ಕೋರ್ಟ್​ಗೆ ತೆರಳಿದೆವು ಮತ್ತು ನಮ್ಮ ರಿಂಗ್​ ವಿನಿಮಯ ಮಾಡಿಕೊಂಡೆವು. ಹೀಗಾಗಿ ಈ ವಾರ ಕಾನೂನು ನಷ್ಟದ ಬಗ್ಗೆ ಅಲ್ಲ, ಆದರೆ ನಮ್ಮ ನಿಶ್ಚಿತಾರ್ಥವಾಗಿದೆ. ನಾವು ಮತ್ತೆ ಇನ್ನೊಂದು ದಿನದ ಹೋರಾಟಕ್ಕೆ ಮರಳುತ್ತೇವೆ ಎಂದು ಬರೆದುಕೊಂಡಿದ್ದಾರೆ.

    Gay Couple 1

    ಕಾನೂನಿನ ಹಿನ್ನಡೆಯ ಹೊರತಾಗಿಯೂ, ಭವಿಷ್ಯದಲ್ಲಿ ಸಮಾನ ಹಕ್ಕುಗಳು ಹಾಗೂ ಮಾನ್ಯತೆಗಾಗಿ ತಮ್ಮ ಹೋರಾಟವನ್ನು ಮುಂದುವರೆಸುವ ಸಂಕಲ್ಪದೊಂದಿಗೆ ಅನನ್ಯ ಮತ್ತು ಉತ್ಕರ್ಷ್​ ತಮ್ಮ ಪ್ರೀತಿ ಮತ್ತು ನಿಶ್ಚಿತಾರ್ಥವನ್ನು ಆಚರಿಸಲು ಆಯ್ಕೆ ಮಾಡಿಕೊಂಡರು. ಸದ್ಯ ಅನನ್ಯ ಮಾಡಿರುವ ಪೋಸ್ಟ್ ವೈರಲ್ ಆಗಿದ್ದು, 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.

    ಸುಪ್ರೀಂಕೋರ್ಟ್​ ಹೇಳಿದ್ದೇನು?
    ಭಾರತದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ (ಅ.17)ಮಹತ್ವದ ತೀರ್ಪು ಪ್ರಕಟಿಸಿದ್ದು, ಸಲಿಂಗ ವಿವಾಹಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ಹೇಳಿದೆ. ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಹಕ್ಕನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿತು. ಸಲಿಂಗ ವಿವಾಹಕ್ಕೆ ಒಪ್ಪಿಗೆ ನೀಡುತ್ತಿಲ್ಲ ಎಂಬ ಕಾರಣದಿಂದ ವಿಶೇಷ ವಿವಾಹ ಕಾಯ್ದೆಯನ್ನು ರದ್ದುಪಡಿಸಲು ಸಾಧ್ಯವಿಲ್ಲ. ಸಲಿಂಗ ವಿವಾಹ ಮಾನ್ಯತೆಯ ವಿಚಾರದಲ್ಲಿ ಸಂಸತ್ತು ತೀರ್ಮಾನಿಸಬೇಕು. ಹೊಸ ವಿವಾಹ ವ್ಯವಸ್ಥೆಯನ್ನು ರಚಿಸುವಂತೆ ಸಂಸತ್ತು ಅಥವಾ ಸರ್ಕಾರವನ್ನು ನಾವು ಒತ್ತಾಯಿಸಲು ಸಾಧ್ಯವಿಲ್ಲ. ವಿಶೇಷ ವಿವಾಹ ಕಾಯ್ದೆಯ (SMA) ಸೆಕ್ಷನ್ 4 ಸಲಿಂಗ ದಂಪತಿಗಳನ್ನು ಒಳಗೊಂಡಿಲ್ಲ ಎಂಬ ಕಾರಣಕ್ಕೆ ಅಸಾಂವಿಧಾನಿಕ ಎಂದು ಪರಿಗಣಿಸಲಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದು, ಸದ್ಯ ಸಲಿಂಗ ವಿವಾಹದ ನಿರ್ಧಾರವೂ ಕೇಂದ್ರ ಸರ್ಕಾರದ ಅಂಗಳದಲ್ಲಿದೆ. (ಏಜೆನ್ಸೀಸ್​)

    ಇದೇ ನೋಡಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿದ ಏಷ್ಯಾದ ಮೊದಲ ರಾಷ್ಟ್ರ!

    ನಾವು ಅಧಿಕಾರಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆ ಅಥವಾ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ: ಶಶಿ ತರೂರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts