More

    ಶಿವಮೊಗ್ಗದಲ್ಲಿ ಹೈ ಸೆಕ್ಯುರಿಟಿ ಜೈಲ್

    ಅರವಿಂದ ಅಕ್ಲಾಪುರ ಶಿವಮೊಗ್ಗ
    ರಾಜ್ಯ ಬಜೆಟ್ ಮಂಡನೆಯಾದ ಬಳಿಕ ಈಗ ಹೈ ಸೆಕ್ಯುರಿಟಿ ಜೈಲ್‌ನ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಸಾರ್ವಜನಿಕರಲ್ಲಿ ಈ ಬಗ್ಗೆ ಕುತೂಹಲವೂ ಹೆಚ್ಚುತ್ತಿದೆ. ಅತ್ಯಂತ ಭದ್ರತೆಯುಳ್ಳ ಕೇಂದ್ರ ಕಾರಾಗೃಹವಿರುವಾಗ ಇದೇನು ಹೈ ಸೆಕ್ಯುರಿಟಿ ಜೈಲ್ ಎಂದು ಅನೇಕರು ಕುತೂಹಲದಿಂದ ಪ್ರಶ್ನೆ ಮಾಡುತ್ತಿದ್ದಾರೆ.

    ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಹೈ ಸೆಕ್ಯುರಿಟಿ ಜೈಲ್ ನಿರ್ಮಾಣಕ್ಕೆ 100 ಕೋಟಿ ರೂ. ಘೋಷಿಸಿರುವುದು ಜಿಲ್ಲೆಗೆ ಈ ಬಾರಿ ಬಜೆಟ್‌ನಲ್ಲಿ ಸಿಕ್ಕ ದೊಡ್ಡ ಯೋಜನೆಯಾಗಿದೆ. ಸಹಜವಾಗಿಯೇ ಈ ಯೋಜನೆ ಬಗ್ಗೆ ಕುತೂಹಲ ಮೂಡಿದೆ. ಅದೆಲ್ಲದಕ್ಕೂ ಉತ್ತರ ಇಲ್ಲಿದೆ.
    ಸೋಗಾನೆ ಕೇಂದ್ರ ಕಾರಾಗೃಹದ ಆವರಣದಲ್ಲಿ ಖಾಲಿಯಿರುವ 20 ಎಕರೆ ಭೂಮಿಯಲ್ಲಿ ಗರಿಷ್ಠ ಭದ್ರತೆಯ ಜೈಲು ನಿರ್ಮಾಣ ಮಾಡಲಾಗುತ್ತದೆ. ಗಂಭೀರ ಅಪರಾಧ ಎಸಗಿದ ವಿಚಾರಣಾಧೀನ ಕೈದಿಗಳು ಹಾಗೂ ಶಿಕ್ಷೆಗೆ ಗುರಿಯಾದವರನ್ನು ಇರಿಸಲು ಈ ಜೈಲು ಬಳಕೆಯಾಗಲಿದೆ. ವಿಚಾರಣಾಧೀನ ಕೈದಿಗಳನ್ನು ಪದೇಪದೆ ನ್ಯಾಯಾಲಯಕ್ಕೆ ಕರೆದೊಯ್ಯಬೇಕಾದ ಸಂದರ್ಭದಲ್ಲಿ ಪೊಲೀಸರು ಸಾಕಷ್ಟು ಒತ್ತಡ ಎದುರಿಸುತ್ತಿದ್ದಾರೆ. ಭದ್ರತೆಯಲ್ಲಿ ಸ್ವಲ್ಪ ಲೋಪವಾದರೂ ಆರೋಪಿ ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇಲ್ಲವೇ ಆತನ ಪ್ರಾಣಕ್ಕೆ ಅಪಾಯವಿರುತ್ತದೆ. ಅದರಲ್ಲೂ ಭಯೋತ್ಪಾದನೆ, ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಯತ್ನಿಸಿದವರನ್ನು ಮಾರ್ಗದುದ್ದಕ್ಕೂ ತೀವ್ರ ನಿಗಾದಿಂದ ನೋಡಿಕೊಳ್ಳಬೇಕಾಗುತ್ತದೆ. ಇಲ್ಲಿಯೇ ಗರಿಷ್ಠ ಭದ್ರತೆಯ ಜೈಲು ನಿರ್ಮಾಣವಾದರೆ ಸಿಬ್ಬಂದಿ ಮೇಲಿನ ಒತ್ತಡ ಕಡಿಮೆಯಾಗಲಿದೆ.
    ಪ್ರಸ್ತುತ ಸೋಗಾನೆ ಕೇಂದ್ರ ಕಾರಾಗೃಹ 63 ಎಕರೆಯಲ್ಲಿ ವ್ಯಾಪಿಸಿದೆ. ಇಲ್ಲಿ 600ಕ್ಕೂ ಹೆಚ್ಚು ಕೈದಿಗಳಿದ್ದಾರೆ. ವಿಚಾರಣಾಧೀನ ಹಾಗೂ ಶಿಕ್ಷೆಗೆ ಗುರಿಯಾದವರು ಸಮಪ್ರಮಾಣದಲ್ಲಿದ್ದಾರೆ. ಗಾಂಜಾ ಪ್ರಕರಣದಲ್ಲಿ ಸಿಕ್ಕಿಬಿದ್ದವರು, ರೌಡಿಶೀಟರ್‌ಗಳು, ಕೊಲೆ ಆರೋಪಿಗಳು ಹೀಗೆ ತರಹೇವಾರಿ ಮಂದಿ ಇಲ್ಲಿದ್ದಾರೆ. ಆದರೆ ತುಂಬ ಗಂಭೀರ ಪ್ರಕರಣದಲ್ಲಿ ಭಾಗಿಯಾದವರು, ಎನ್‌ಐಎ ತನಿಖೆಗೆ ಒಳಪಟ್ಟವರನ್ನು ಇಲ್ಲಿರಿಸುವುದು ಅಷ್ಟೊಂದು ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಇದೀಗ ಗರಿಷ್ಠ ಭದ್ರತೆಯ ಜೈಲು ನಿರ್ಮಾಣಕ್ಕೆ ಎರಡು ವರ್ಷಗಳ ಹಿಂದೆಯೇ ಕೇಂದ್ರದ ಗೃಹ ಇಲಾಖೆ ಹಸಿರು ನಿಶಾನೆ ತೋರಿತ್ತು.
    ಈ ಸಂಬಂಧ ನೀಲಿನಕ್ಷೆ ಹಾಗೂ ಸಮಗ್ರ ಅಂದಾಜು ಪಟ್ಟಿ ಸಲ್ಲಿಸುವಂತೆ ಪೊಲೀಸ್ ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಕಾರಾಗೃಹ ಮತ್ತು ಸುಧಾರಣೆ ಸೇವೆ ವಿಭಾಗದಿಂದ ಸೂಚನೆ ರವಾನಿಸಲಾಗಿತ್ತು. ಇದೀಗ ಬಜೆಟ್‌ನಲ್ಲಿ ಅನುದಾನ ಘೋಷಣೆಯಾಗಿದೆ.
    ಹೀಗಿರಲಿದೆ ಹೊಸ ಜೈಲು: ಕಾರಾಗೃಹ ಆವರಣದಲ್ಲಿರುವ 20 ಎಕರೆ ಜಮೀನಿನಲ್ಲಿ ಗರಿಷ್ಠ ಭದ್ರತೆಯ ಜೈಲು, ಸಿಬ್ಬಂದಿ ವಸತಿ ಗೃಹ ನಿರ್ಮಾಣವಾಗಲಿದೆ. 140 ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತದೆ. 280 ಬಂಧಿಗಳ ಸಾಮರ್ಥ್ಯದ ಕಾರಾಗೃಹ ಕಟ್ಟಡ, ವಸತಿ ಸಮುಚ್ಚಯ ನಿರ್ಮಾಣವಾಗಲಿದೆ. ಹೆಚ್ಚುತ್ತಿರುವ ಗಂಭೀರ ಅಪರಾಧ ಪ್ರಕರಣಗಳಿಗೆ ಅನುಗುಣವಾಗಿ ಕೇಂದ್ರ ಗೃಹ ಇಲಾಖೆ ಗರಿಷ್ಠ ಭದ್ರತೆಯ ಜೈಲಿಗೆ ಒತ್ತು ನೀಡಿದೆ.
    ಏರ್‌ಪೋರ್ಟ್ ಅನುಕೂಲ:ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಹೊಂದಿಕೊಂಡಂತೆಯೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಕಾರಾಗೃಹದ ಮುಖ್ಯ ದ್ವಾರಕ್ಕೆ ಸನಿಹದಲ್ಲೇ ಏರ್‌ಪೋರ್ಟ್‌ಗೆ ಪ್ರವೇಶಿಸಲು ಗೇಟ್ ಅಳವಡಿಸಲಾಗಿದೆ. ಏರ್‌ಪೋರ್ಟ್‌ನ ಪ್ರವೇಶ ದ್ವಾರಕ್ಕೂ ಕೇಂದ್ರ ಕಾರಾಗೃಹಕ್ಕೂ ಅಷ್ಟೊಂದು ದೂರವೂ ಇಲ್ಲ. ಕೇಂದ್ರ ಕಾರಾಗೃಹದ ಆವರಣದಲ್ಲಿ ಗರಿಷ್ಠ ಭದ್ರತೆಯ ಜೈಲು ನಿರ್ಮಾಣಕ್ಕೆ ಇನ್ನೂ ಒಂದೆರಡು ವರ್ಷ ಸಮಯ ಬೇಕಾಗುತ್ತದೆ. ಏರ್‌ಪೋರ್ಟ್ ಸನಿಹದಲ್ಲೇ ಇರುವುದರಿಂದ ರಾಜ್ಯದ ಬೇರೆ ಜೈಲುಗಳಿಂದ, ಬೇರೆ ರಾಜ್ಯದ ಕಾರಾಗೃಹಗಳಿಂದ ಕೈದಿಗಳನ್ನು ಇಲ್ಲಿಗೆ ಕರೆತರುವುದು, ಇಲ್ಲಿಂದ ಕರೆದೊಯ್ಯುವುದು ಸುಲಭವಾಗುತ್ತದೆ.
    ಇತ್ತೀಚಿನ ಘಟನೆ ಕಾರಣವೇ?: ಹೈ ಸೆಕ್ಯುರಿಟಿ ಜೈಲ್ ನಿರ್ಮಾಣಕ್ಕೆ ಒತ್ತು ನೀಡಲು ಇತ್ತೀಚೆಗೆ ನಡೆದ ಕೆಲವು ಘಟನೆಗಳು ಕಾರಣವೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಹರ್ಷ ಹತ್ಯೆ ಪ್ರಕರಣ, ಬಳಿಕ ಟ್ರಯಲ್ ಬ್ಲಾಸ್ಟ್ ನಡೆಸಿದ ಶಂಕಿತ ಉಗ್ರರು ಮಲೆನಾಡನ್ನೇ ಬೆಚ್ಚಿಬೀಳುವಂತೆ ಮಾಡಿದ್ದರು. ಎರಡೂ ಪ್ರಕರಣಗಳ ಆರೋಪಿಗಳನ್ನು ಅಲ್ಪ ಕಾಲದ ತನಿಖೆ ಬಳಿಕ ಶಿವಮೊಗ್ಗ ಜೈಲಿನಿಂದ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಶಿವಮೊಗ್ಗದಲ್ಲೇ ಗರಿಷ್ಠ ಭದ್ರತೆಯ ಕಾರಾಗೃಹವಿದ್ದಿದ್ದರೆ ಅವರನ್ನು ಬೇರೆ ಜೈಲಿಗೆ ಕಳಿಸುವ ಪ್ರಮೇಯವೇ ಬರುತ್ತಿರಲಿಲ್ಲ. ಹೀಗಾಗಿ ಹೆಚ್ಚು ಭದ್ರತೆಯುಳ್ಳ ಜೈಲಿನ ತೀರ್ಮಾನ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts