More

    1.72 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದ ಡಿಸಿ ರಘುನಂದನ

    ರಾಣೆಬೆನ್ನೂರ: ಇಲ್ಲಿಯ ನಗರಸಭೆ ಸರ್.ಎಂ. ವಿಶ್ವೇಶ್ವರಯ್ಯ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ 2024-25ನೇ ಸಾಲಿನ 1.72 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದರು.
    ನಗರದ ಆಯ್ದ ಸ್ಥಳದಲ್ಲಿ ಬಸ್ ನಿಲ್ದಾಣ ನಿರ್ಮಾಣ, ಸಿಸಿ ಕ್ಯಾಮರಾ ಅಳವಡಿಕೆ, ಗುಡ್ಡದ ಸ್ಮಾರಕ ಭವನ ಅಭಿವೃದ್ಧಿ, ನಗರದ ರಸ್ತೆ, ಚರಂಡಿ ನಿರ್ಮಾಣ, ಸಮರ್ಪಕ ಕುಡಿಯುವ ನೀರು ಪೂರೈಕೆ, ಬೀದಿ ದೀಪಗಳ ವ್ಯವಸ್ಥೆ, ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆಗೆ ಪ್ರತ್ಯೇಕ ಅನುದಾನ, ನಗರದಲ್ಲಿನ ಸ್ಮಶಾನಗಳ ಅಭಿವೃದ್ಧಿ ಹಾಗೂ ವಿದ್ಯುತ್ ಚಿತಾಗಾರ ನಿರ್ಮಾಣ ಸೇರಿ ಪ್ರಮುಖ ಕಾಮಗಾರಿಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ.
    ಆದಾಯ ನಿರೀಕ್ಷೆ…
    ನಗರಸಭೆ ಸ್ವಂತ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಕರ, ಅಭಿವೃದ್ಧಿ ಕರ, ಮಳಿಗೆ ಬಾಡಿಗೆ, ಉದ್ದಿಮೆ ಪರವಾನಗಿ, ಕಟ್ಟಡ ಪರವಾನಗಿ ಸೇರಿ ಇತರ ಮೂಲದಿಂದ ಒಟ್ಟು 23.02 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಸರ್ಕಾರದಿಂದ ಎಸ್‌ಎಫ್‌ಸಿ ಮುಕ್ತ ನಿಧಿಯ 2.60 ಕೋಟಿ ರೂ., ಎಸ್‌ಎಫ್‌ಸಿ ವಿದ್ಯುತ್ ಅನುದಾನ 10 ಕೋಟಿ ರೂ., ಎಸ್‌ಎಫ್‌ಸಿ ವೇತನ ಅನುದಾನ 5 ಕೋಟಿ ರೂ., ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ 2.50 ಕೋಟಿ., ಕೇಂದ್ರ ಸರ್ಕಾರ 15ನೇ ಹಣಕಾಸು ಯೋಜನೆಯಡಿ 5 ಕೋಟಿ ರೂ., ಎಸ್‌ಎಫ್‌ಸಿ ಕುಡಿಯುವ ನೀರಿನ ಯೋಜನೆಗಾಗಿ 10 ಲಕ್ಷ ರೂ., ಅಮೃತ ನಗರ ಯೋಜನೆಯಡಿ 4 ಕೋಟಿ ರೂ., ಎಸ್‌ಎಫ್‌ಸಿ ವಿಶೇಷ ಅನುದಾನದಡಿ 5 ಕೋಟಿ ರೂ. ಹಾಗೂ ಇತರ ಅನುದಾನ ಸೇರಿ ಒಟ್ಟು 55 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ.
    ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ…
    ನಗರದ ರಸ್ತೆ, ಚರಂಡಿ ದುರಸ್ತಿ ಹಾಗೂ ನಿರ್ಮಾಣಕ್ಕಾಗಿ 20 ಕೋಟಿ ರೂ. ಮೀಸಲಿರಿಸಲಾಗಿದೆ. ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ 3 ಲಕ್ಷ ರೂ., ಮಳಿಗೆ ನಿರ್ಮಾಣಕ್ಕೆ 2.50 ಕೋಟಿ ರೂ., ಸಿಸಿ ಕ್ಯಾಮರಾ ಅಳವಡಿಸಲು 60 ಲಕ್ಷ ರೂ., ಕುಡಿಯುವ ನೀರಿನ ನಿರ್ವಹಣೆಗಾಗಿ 3.65 ಕೋಟಿ ರೂ., ಬೀದಿ ದೀಪ ಕಲ್ಪಿಸಲು ಹಾಗೂ ನಿರ್ವಹಣೆಗಾಗಿ 1.55 ಕೋಟಿ ರೂ., ಸಾರ್ವಜನಿಕ ಶೌಚಗೃಹ ನಿರ್ಮಾಣ ಹಾಗೂ ದುರಸ್ತಿಗಾಗಿ 25 ಲಕ್ಷ ರೂ., ಘನತ್ಯಾಜ್ಯ ನಿರ್ವಹಣೆಗಾಗಿ 1.90 ಕೋಟಿ ರೂ., ಉದ್ಯಾನಗಳ ಅಭಿವೃದ್ಧಿಗೆ 1.65 ಕೋಟಿ ರೂ., ಕಾರ್ಮಿಕರ ವೇತನ, ಹೊರಗುತ್ತಿಗೆ ವಾಹನ ಚಾಲಕರ ವೇತನ, ಇಂಧನ, ಪೌರ ಕಾರ್ಮಿಕರಿಗೆ ಉಪಹಾರ ಭತ್ಯೆ, ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸಾ ವೆಚ್ಚ, ವಾಹನಗಳ ದುರಸ್ತಿ ವೆಚ್ಚಕ್ಕಾಗಿ ಒಟ್ಟಾರೆ 40 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ.
    ಬಜೆಟ್‌ಗೆ ಕಾಂಗ್ರೆಸ್ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಸೂಚನೆ ಮಾಡಿದರೆ ಮತ್ತೊಬ್ಬ ಕಾಂಗ್ರೆಸ್ ಸದಸ್ಯ ಶಶಿಧರ ಬಸೇನಾಯ್ಕ ಅನುಮೋದನೆ ನೀಡಿದರು. ಸಭೆಗೂ ಮುನ್ನ ಇತ್ತೀಚೆಗೆ ನಿಧನ ಹೊಂದಿದ ನಗರಸಭೆ ಮಾಜಿ ಅಧ್ಯಕ್ಷ ರಾಮಣ್ಣ ಕೋಲಕಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
    ಆಯುಕ್ತ ಎಚ್. ಮಹಾಂತೇಶ, ಲೆಕ್ಕ ಅಧೀಕ್ಷಕಿ ವಾಣಿಶ್ರೀ ಹಾಗೂ ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts