More

    ಲೋಕಸಭಾ ಚುನಾವಣೆಗೆ ಉಡುಪಿ ಜಿಲ್ಲಾಡಳಿತ ಸಜ್ಜು

    ಚುನಾವಣಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾಹಿತಿ — 1842 ಮತಗಟ್ಟೆಗಳಲ್ಲಿ ಮತದಾನ

    ಉಡುಪಿ: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಏ.26ರಂದು ನಡೆಯಲಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಎಲ್ಲ 8 ವಿಧಾನಸಭಾ ಕ್ಷೇತ್ರದಲ್ಲಿ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 1842 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾಹಿತಿ ನೀಡಿದರು.

    ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಸಂಜೆ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತದಾನದ ದಿನದಂದು ಸಾರ್ವತ್ರಿಕ ರಜೆ ನೀಡಲಾಗಿದೆ. ಹೀಗಾಗಿ ಎಲ್ಲ ಅರ್ಹ ಮತದಾರರೂ ತಪ್ಪದೆ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಬೇಕು ಎಂದರು.

    25ರಂದು ಮಸ್ಟರಿಂಗ್​ ಕಾರ್ಯ

    ಏ.25ರಂದು ಬೆಳಗ್ಗೆ ಮತಯಂತ್ರಗಳ ಮಸ್ಟರಿಂಗ್​ ಕಾರ್ಯ ನಡೆಯಲಿದೆ. ಮಧ್ಯಾಹ್ನ ಊಟದ ಬಳಿಕ 2,278 ಇವಿಎಂ ಬಿಯು, 2,336 ಇವಿಎಂ ಸಿಯು, 2,451 ವಿವಿ ಪ್ಯಾಟ್ಸ್​ ಹಾಗೂ ಅಗತ್ಯ ಪರಿಕರಗಳೊಂದಿಗೆ 260 ವಾಹನಗಳಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ನಿಗದಿತ ಮತಗಟ್ಟೆಗಳಿಗೆ ತೆರಳಲಿದ್ದಾರೆ. 162 ಸೆಕ್ಟರ್​ ಅಧಿಕಾರಿಗಳೂ ಇರಲಿದ್ದು, ಎಲ್ಲ ವಾಹನಗಳಿಗೆ ಜಿಪಿಎಸ್​ ಅಳವಡಿಸಲಾಗುವುದು ಎಂದರು.

    ಮನೆ ಮನೆ ಮತದಾನ ಯಶಸ್ಸು

    85 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರಿಗೆ ಈ ಬಾರಿ ಮನೆಯಲ್ಲೇ ಮತದಾನ ಪ್ರಕ್ರಿಯೆ ಯಶ ಕಂಡಿದೆ. ಒಟ್ಟು 4,517 ಹಿರಿಯರು ಮತ ಚಲಾಯಿಸಿದ್ದು, 96.85 ಪ್ರತಿಶತ ಮತದಾನವಾಗಿದೆ. 1,408 ಅಂಗವಿಕಲರು ಹಕ್ಕು ಚಲಾಯಿಸಿದ್ದು, 98.05 ಪ್ರತಿಶತ ಮತದಾನವಾಗಿದೆ. ಇದಲ್ಲದೆ, ಚುನಾವಣಾ ಕರ್ತವ್ಯದಲ್ಲಿರುವ 16 ಇಲಾಖೆಗಳ 395 ನೌಕರರು ಅರ್ಜಿ ಸಲ್ಲಿಸಿದ್ದು, ಈವರೆಗೆ 159 ಜನರು ಅಂಚೆಪತ್ರದ ಮೂಲಕ ಮತ ಮಯದಾನ ಮಾಡಿದ್ದಾರೆ ಎಂದರು.

    8 ಕ್ಷೇತ್ರಗಳಲ್ಲಿ ಕಾರ್ಯ ಯೋಜನೆ

    ಉಡುಪಿ -ಚಿಕ್ಕಮಗಳೂರು ಕ್ಷೇತ್ರದಲ್ಲಿ 405 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ. 52 ಮತಗಟ್ಟೆಗಳಲ್ಲಿ ಸಿಎಪಿಎಫ್ಸಿ, 1270 ವೆಬ್​ಕಾಸ್ಟ್​, 459 ಮೈಕ್ರೋ ಒಬ್ಸರ್ವರ್​, 18 ವಿಡಿಯೋಗ್ರಾಫರ್​ ಇರಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಈಗಿರುವ 15 ಚೆಕ್​ಪೋಸ್ಟ್​ ಬಿಟ್ಟು 3 ಹೆಚ್ಚುವರಿ ಪೋಸ್ಟ್​ ತೆರೆಯಲಾಗಿದೆ. ಈವರೆಗೆ 94.67 ಲಕ್ಷ ರೂ. ಮೌಲ್ಯದ 15,380.125 ಲೀ. ಮದ್ಯ, 1.10 ಕೋಟಿ ರೂ. ಮೌಲ್ಯದ 3.449 ಕೆಜಿ ಡ್ರಗ್ಸ್​, 3.68 ಕೋಟಿ ರೂ. ಮೌಲ್ಯದ ಬಟ್ಟೆ, ಬ್ಯಾಗ್ಸ್​, ಹಾಗೂ ತಂಪು ಪಾನೀಯಗಳ 586 ಬಾಕ್ಸ್ ವಶಪಡಿಸಿಕೊಳ್ಳಲಾಗಿದೆ ಎಂದರು.

    ಕ್ಷೇತ್ರದಲ್ಲಿದ್ದಾರೆ 15,85,162 ಮತದಾರರು

    ಕ್ಷೇತ್ರ – ಪುರುಷ – ಮಹಿಳೆ – ತೃ.ಲಿಂಗ
    ಕುಂದಾಪುರ- 1,01,904 – 1,09,932 – 2
    ಉಡುಪಿ- 1,06,680 – 1,14,603 – 2
    ಕಾಪು- 92,290 – 1,00,304 – 5
    ಕಾರ್ಕಳ- 92,864 – 1,00,648 – 0
    ಶೃಂಗೇರಿ- 82,260 – 86,690 – 1
    ಮೂಡಿಗೆರೆ- 83,298 – 88,339 – 5
    ಚಿಕ್ಕಮಗಳೂರು- 1,13,854 – 1,18,336 – 20
    ತರೀಕೆರೆ- 95,065 – 98,058 – 2
    ಒಟ್ಟು- 7,68,215 – 8,16,910 – 37

    ಜಿಲ್ಲೆಯಲ್ಲಿ 24ರ ಸಂಜೆ 6 ಗಂಟೆಯಿಂದ 144ನೇ ಕಲಂ ಜಾರಿಯಾಗಲಿದೆ. 5ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ಮನೆಮನೆ ಪ್ರಚಾರ ನಡೆಸಬಹುದು. ಯಾವುದೇ ರೀತಿಯ ಮದ್ಯದ ಅಂಗಡಿಯನ್ನೂ ತೆರೆಯುವಂತಿಲ್ಲ. ಜೂನ್​ 1ರ ವರೆಗೂ ಯಾವುದೇ ಫಲಿತಾಂಶ ಅಥವಾ ಸಮೀಕ್ಷಾ ವರದಿ ಪ್ರಕಟಿಸುವಂತಿಲ್ಲ. ಅರ್ಹ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ನಿರ್ಭೀತಿಯಿಂದ ತಮ್ಮ ಹಕ್ಕು ಚಲಾಯಿಸಬೇಕು.

    ಡಾ. ಕೆ.ವಿದ್ಯಾಕುಮಾರಿ.
    ಜಿಲ್ಲಾ ಚುನಾವಣಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts