More

    ಸೂಳೆಕೆರೆ ರಕ್ಷಕ ಉಮೇದುವಾರನಿಗೆ ಬೆಂಬಲ  ಗುರುಬಸವ ಸ್ವಾಮೀಜಿ

    ದಾವಣಗೆರೆ: ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ಎಂಬ ಖ್ಯಾತಿ ಗಳಿಸಿದ, ಚನ್ನಗಿರಿ ತಾಲೂಕಿನ ಸೂಳೆಕೆರೆ ಸಂರಕ್ಷಣೆಗೆ ಭರವಸೆ ನೀಡುವ ಲೋಕಸಭಾ ಅಭ್ಯರ್ಥಿಗೆ ಸೂಳೆಕೆರೆ ನೀರು ಬಳಕೆದಾರರು ಬೆಂಬಲಿಸಬೇಕು ಎಂದು ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಮನವಿ ಮಾಡಿದರು.
    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷ, ಅಭ್ಯರ್ಥಿಗಿಂತಲೂ ಸೂಳೆಕೆರೆ ಮತ್ತು ಅದರ ಇತಿಹಾಸದ ಉಳಿವು ಅಗತ್ಯವಿದೆ. ಈ ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸುವ, ಪ್ರೇಕ್ಷಣೀಯ ತಾಣವಾಗಿಸುವ ಭರವಸೆ ನೀಡಿದವರಿಗೆ ಚುನಾವಣೆಯಲ್ಲಿ ಬೆಂಬಲಿಸಲು ಖಡ್ಗ ಸಂಘ ಹಾಗೂ ಸೂಳೆಕೆರೆ ಸಂರಕ್ಷಣಾ ಸಮಿತಿ ನಿರ್ಧರಿಸಿದ್ದು ಇದಕ್ಕೆ ಸೂಳೆಕೆರೆ ಅಚ್ಚುಕಟ್ಟಿನ ನೀರು ಬಳಕೆದಾರರು ಗಮನ ಹರಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಈ ಎರಡೂ ಸಂಘಟನೆಗಳು ಅನೇಕ ದಿನಗಳಿಂದ ನಿರಂತರ ಹೋರಾಟ ನಡೆಸಿದ್ದರೂ ಸೂಳೆಕೆರೆ ಒತ್ತುವರಿ ತೆರವಾಗಿಲ್ಲ. ಹೂಳೆತ್ತಿ ಕೆರೆಯ ಶೇಖರಣಾ ಸಾಮರ್ಥ್ಯ ಹೆಚ್ಚಿಸುವ ವಿಚಾರ ಕಾರ್ಯಗತವಾಗಿಲ್ಲ. ಮತ್ತೆ ಮತ್ತೆ ಈ ಕೆರೆ ನಿರ್ಲಕ್ಷೃಕ್ಕೆ ತುತ್ತಾಗಿದೆ. ಇದರ ಅಭಿವೃದ್ಧಿಯಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಕಾಡುತ್ತಿದೆ. ಇದನ್ನು ನೀಗಿಸಬೇಕಿದೆ. ಈಗಾಗಲೆ ನೀರಿನ ಹಾಹಾಕಾರದ ಅರಿವಾಗಿರುವ ಮತದಾರರು ಎಚ್ಚೆತ್ತುಕೊಳ್ಳಬೇಕು ಎಂದರು.
    ಖಡ್ಗ ಸಂಘಟನೆ ಅಧ್ಯಕ್ಷ ಬಿ.ಆರ್. ರಘು ಮಾತನಾಡಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು ಲಿಖಿತವಾಗಿ ಅಥವಾ ಬಹಿರಂಗವಾಗಿ ಸೂಳೆಕೆರೆ ಅಭಿವೃದ್ಧಿಪಡಿಸುವ ಬಗ್ಗೆ ಮಾತು ನೀಡಿದಲ್ಲಿ ಅಂಥವರ ಗೆಲುವಿಗೆ ಬೆಂಬಲಿಸಲಾಗುವುದು ಎಂದು ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಚಂದ್ರಹಾಸ ಲಿಂಗದಹಳ್ಳಿ, ಕುಬೇಂದ್ರಸ್ವಾಮಿ ಇದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts