More

    ಕಾಂಗ್ರೆಸ್ ಬಗ್ಗೆ ಮೋದಿ ಅಪಪ್ರಚಾರ ಡಿ.ಬಸವರಾಜ್ ಅಸಮಾಧಾನ

    ದಾವಣಗೆರೆ: ದೇಶದಲ್ಲಿ ಇದುವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ಎಂದಿಗೂ ಮಾಂಗಲ್ಯ ಭಾಗ್ಯ ಕಸಿದಿಲ್ಲ. ಆದರೆ ಪ್ರಧಾನಿ ನರೇಂದ್ರಮೋದಿ ಪ್ರಚಾರ ಸಭೆಗಳಲ್ಲಿ ಸುಳ್ಳು ಹೇಳುತ್ತ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್ ತಿಳಿಸಿದರು.
    ಹೇಗಾದರೂ ಮಾಡಿ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಪಣ ತೊಟ್ಟಿರುವ ಮೋದಿ ಉತ್ತರ ಭಾರತದಲ್ಲಿ ಹೇಳಿದ ಸುಳ್ಳುಗಳನ್ನು ಕರ್ನಾಟಕದಲ್ಲೂ ಹೇಳುತ್ತಿದ್ದಾರೆ. ಬಿಜೆಪಿಯ ಸೋಲಿನ ಭೀತಿಯಿಂದಾಗಿಯೇ ಕರ್ನಾಟಕಕ್ಕೆ ಮೋದಿ ಪದೇ ಪದೇ ಭೇಟಿ ನೀಡುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
    ಕಳೆದ 10 ವರ್ಷದಲ್ಲಿ ಭಾರತ ವಿಕಸಿತವಾಗುವುದರ ಬದಲಿಗೆ ವಿನಾಶ ಆಗಿದೆ. ರಾಜಕೀಯ ಪಕ್ಷಗಳಿಗೆ ದಾವಣಗೆರೆ ಅದೃಷ್ಟದ ನೆಲವಾಗಿದ್ದರೆ ಬಿಜೆಪಿ ಪಾಲಿಗೆ ಇದು ಸಾಧ್ಯವಾಗಿಲ್ಲ. ಹಿಂದಿನ ವಿಧಾನಸಭೆ ಚುನಾವಣೆ ವೇಳೆ ದೊಡ್ಡ ಸಮಾವೇಶ ನಡೆಸಿಯೂ ಬಿಜೆಪಿ ಗೆಲ್ಲಲಿಲ್ಲ. ಭಾನುವಾರ ಆಯೋಜಿಸಿದ್ದ ಸಮಾವೇಶದಲ್ಲಿ ಪ್ರಧಾನಿಗೆ ಹಾಕಬೇಕಿದ್ದ ಕಮಲದ ಟೋಪಿ ಕೆಳಗೆ ಬಿದ್ದಿದ್ದೇ ಭಾಜಪ ಸೋಲಿನ ಸೂಚನೆಯಾಗಿದೆ ಎಂದು ಹೇಳಿದರು.
    ಮಣಿಪುರದಲ್ಲಿ ಕುಕಿ ಬುಡಕಟ್ಟು ಸಮುದಾಯದ ಮೂವರ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡದ ಮೋದಿ, ಕೊನೆಪಕ್ಷ ಅಲ್ಲಿಗೆ ತೆರಳಿ ಸಾಂತ್ವನವನ್ನೂ ಹೇಳಿಲ್ಲ. ದೇಶದ ಘನತೆ ಹೆಚ್ಚಿಸಿದ ಮಹಿಳಾ ಕುಸ್ತಿಪಟುಗಳ ಬಗ್ಗೆ ಚಕಾರ ಎತ್ತಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಪ್ರಜ್ವಲ್ ರೇವಣ್ಣ ಅವರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಬಗ್ಗೆ ಮೋದಿ ಅವರಲ್ಲಿ ಬೇಹುಗಾರಿಕೆ ಮಾಹಿತಿ ಇರಲಿಲ್ಲವೆ? ಈ ವಿಚಾರವಾಗಿ ಶೋಭಾ ಕರಂದ್ಲಾಜೆ, ಯಡಿಯೂರಪ್ಪ, ಸಿ.ಟಿ.ರವಿ ಯಾಕೆ ಮಾತಾಡುತ್ತಿಲ್ಲ? ಎಂದು ಪ್ರಶ್ನಿಸಿದರು.
    ನಿರುದ್ಯೋಗ, ಬೆಲೆ ಏರಿಕೆ, ಹುಣದುಬ್ಬರದ ಸಮಸ್ಯೆಗಳಿಗೆ ಮೋದಿ ಅವರ ಪ್ರಣಾಳಿಕೆಯಲ್ಲಿ ಜಾಗವಿಲ್ಲ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿಲ್ಲ. ನಾವು ಜನರಿಗೆ ಉಚಿತ ಅಕ್ಕಿ ನೀಡುತ್ತಿದ್ದೇವೆ. ಆದರೆ ಮೋದಿ ಸರ್ಕಾರ 29 ರೂ.ಗೆ ಕಿಲೋನಂತೆ ನೀಡುತ್ತಿರುವ ಅಕ್ಕಿಯನ್ನು ಕೊಳ್ಳುವರಿಲ್ಲ ಎಂದೂ ಟೀಕಿಸಿದರು.
    ಸುದ್ದಿಗೋಷ್ಠಿಯಲ್ಲಿ ಎಸ್.ಎಂ. ಜಯಪ್ರಕಾಶ್, ಕೆ.ಎಂ. ಮಂಜುನಾಥ್, ಬಿ.ಎಚ್. ಉದಯಕುಮಾರ್, ಬಿ.ಎಸ್. ಸುರೇಶ್, ಬಿ. ಶಿವಕುಮಾರ್, ಮುಬಾರಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts